ಕಾರ್ಗಲ್: ಎಬಿ ಸೈಟ್‌ನಲ್ಲಿರುವ ಶರಾವತಿ ಜಲವಿದ್ಯುದಾಗಾರದಲ್ಲಿ ಕೇಂದ್ರ ಕಚೇರಿಯ ನಿರ್ದೇಶನದಂತೆ ಗ್ರಿಡ್ ಬೇಡಿಕೆಗೆ ಅನುಗುಣವಾಗಿ ಮಳೆ ನೀರಿನಲ್ಲಿ ಸರಾಸರಿ 1.2 ಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಚೈತನ್ಯ ಪ್ರಭು ತಿಳಿಸಿದರು.
ಶರಾವತಿ ಕಣಿವೆ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ನೀರಿನ ಬಳಕೆ ಬಗ್ಗೆ ಮಾಹಿತಿ ನೀಡಿದ ಅವರು, ‘ಲಿಂಗನಮಕ್ಕಿ ಜಲಾಶಯದ ಹೊರ ಹರಿವು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಒಂದು ವಾರ ಸುರಿದ ಮಳೆಗೆ ಜಲಾಶಯವು ಕಳೆದ ಸಾಲಿನ ನೀರಿನ ಮಟ್ಟವನ್ನು ಸರಿಗಟ್ಟಿದೆ. ಅಣೆಕಟ್ಟೆಯಲ್ಲಿ ಶೇ 83.85ರಷ್ಟು ಜಲ ಸಂಗ್ರಹವಾಗಿದ್ದು, ಈ ನೀರಿನಿಂದ 382.024 ಕೋಟಿ ಯೂನಿಟ್ ವಿದ್ಯುತ್
ಉತ್ಪಾದನೆ ಮಾಡಲು ಸಾಧ್ಯ’ ಎಂದು ಹೇಳಿದರು.
‘ಸದ್ಯ ಸುರಿಯುತ್ತಿರುವ ಮಳೆ ಪ್ರಮಾಣ, ಜಲಾಶಯದಲ್ಲಿ ಸಂಗ್ರಹವಾಗುವ ನೀರಿನ ಮಟ್ಟ, ಒಳಹರಿವು ಮತ್ತು ಹೊರ ಹರಿವಿನ ಸಾಧ್ಯತೆ
ಬಗ್ಗೆ ಸಂಪೂರ್ಣ ಅವಲೋಕನ ಮಾಡಲಾಗುತ್ತಿದ್ದು, ನಿತ್ಯ ಕೇಂದ್ರ ಕಚೇರಿ ಮಾಹಿತಿ ಪಡೆಯುತ್ತಿದೆ. ಇದರ ಮೇಲ್ವಿಚಾರಣೆಗಾಗಿ ಹೆಚ್ಚುವರಿ ಮುಖ್ಯ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಕೆಪಿಸಿಯ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ನೇಮಿಸಿದ್ದಾರೆ’ ಎಂದು ಚೈತನ್ಯ ಪ್ರಭು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.