ಬೆಂಗಳೂರು: ಫ್ರೇಜರ್ ಟೌನಿನ ಕೋಲ್ಸ್ ರಸ್ತೆಯಲ್ಲಿರುವ ಮಾಸಿ ಹೋದ ಗೋಪಿ ಬಣ್ಣದ ಹಳೇ ಬಂಗಲೆ.ಈ ಬಂಗಲೆಯ ಕಾಂಪೌಂಡ್‌ಗೆ ಪುಟ್ಟ ಕಲ್ಲಿನ ಮೇಲೆ ‘ಸಿ.ಕೆ.ಜಾಫರ್ ಷರೀಫ್, ಮಾಜಿ ಕೇಂದ್ರ ಸಚಿವ’ ಎಂದು ಕೆತ್ತಿಸಿ ಅಂಟಿಸಿದ್ದ ಹೆಸರಿನ ಕೆಲವು ಅಕ್ಷರಗಳೇ ಮಾಸಿ ಹೋಗಿದ್ದವು.
ಈ ಮನೆಯ ಮುಂದೆ ಅಲ್ಲಲ್ಲಿ ಜನ ಗುಂಪುಗೂಡಿ ತಮ್ಮ ಮಧ್ಯೆಯೇ ಮಾತನಾಡಿಕೊಳ್ಳುತ್ತಾ ನಿಂತಿದ್ದರು. ಮಂತ್ರಿಗಳು, ರಾಜಕಾರಣಿಗಳು ಒಬ್ಬೊಬ್ಬರಾಗಿ ಬಂದು ಷರೀಫ್ ಅಂತಿಮ ದರ್ಶನ ಪಡೆದುಕೊಂಡು ಹೋಗುತ್ತಿದ್ದರು. ಅಲ್ಲಿ ಬಹಳ ಜನ ಸಂದಣಿಯೇನೂ ಇರಲಿಲ್ಲ.
ಸುಮಾರು ಒಂದೂವರೆ ದಶಕಗಳ ಹಿಂದೆಯೇ ರಾಜಕೀಯ ತೆರೆಮರೆಗೆ ಸರಿದ ಕಾರಣ ಅಭಿಮಾನಿಗಳು ಮತ್ತು ಹಿಂಬಾಲಕರ ದಂಡು ಅಲ್ಲಿ ಕಂಡುಬರಲಿಲ್ಲ. ಷರೀಫರನ್ನು ಬಲ್ಲ ಒಂದಷ್ಟು ಮಧ್ಯ ವಯಸ್ಕರು ಮನೆಗೆ ಬಂದು ಹೋಗುತ್ತಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಮುಖಂಡರೂ ಅಂತಿಮ ನಮನ ಸಲ್ಲಿಸಿದರು. ಬಂದ ಗಣ್ಯರು ಟಿ.ವಿ ಕ್ಯಾಮೆರಾಗಳ ಮುಂದೆ ಗುಣಗಾನ ಮಾಡಿ ಹೋಗುತ್ತಿದ್ದರು.
ಅಲ್ಲಿದ್ದ ಕೆಲವು ಹಿರಿಯರು ಷರೀಫರು ರೈಲ್ವೆ ಕ್ಷೇತ್ರದಲ್ಲಿ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ತಮ್ಮಲ್ಲೇ ಚರ್ಚಿಸುತ್ತಿದ್ದರು. ರಾಜ್ಯದಲ್ಲಿ ಗೇಜ್ ಪರಿವರ್ತನೆ, ಹೊಸ ರೈಲುಗಳ ಆರಂಭ, ಅಚ್ಚು ಮತ್ತು ಗಾಲಿ ಕಾರ್ಖಾನೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗಿತ್ತು. ಇಷ್ಟಾದರೂ ರಾಜ್ಯ ಸರ್ಕಾರದಲ್ಲಿ ಪ್ರಮುಖ ಸ್ಥಾನವನ್ನು ಗಿಟ್ಟಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರ ಅವರ ಮುಖದಲ್ಲಿತ್ತು.
ಷರೀಫರ ಇಬ್ಬರ ಮಕ್ಕಳು ಅಕಾಲಿಕ ಸಾವಿಗೆ ತುತ್ತಾಗಿದ್ದು, ಮೊಮ್ಮಕ್ಕಳೂ ರಾಜಕೀಯ ನೆಲೆ ಕಾಣಲಿಲ್ಲ. ಕೊನೆಗಾಲದಲ್ಲಿ ಇದು ಅವರಿಗೆ ಕೊರಗಿಗೆ ಕಾರಣವಾಗಿತ್ತು. ರಾಜಕೀಯವಾಗಿ ಇನ್ನಷ್ಟು ಅವಕಾಶಗಳು ಸಿಕ್ಕಿದ್ದರೆ, ಇನ್ನಷ್ಟು ಕೆಲಸ ಮಾಡುತ್ತಿದ್ದರು ಎಂಬ ಅಭಿಪ್ರಾಯವೂ ಅಲ್ಲಿ ಕೇಳಿ ಬಂದಿತು.
ಮನೆಯ ಮಹಡಿಯಲ್ಲಿ ಕುಟುಂಬದ ಸದಸ್ಯರು ಮೌನವಾಗಿ ನಿಂತಿದ್ದರು. ಅವರ ಕಣ್ಣುಗಳಲ್ಲಿ ದುಃಖ ಹೆಪ್ಪುಗಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.