ADVERTISEMENT

ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 7:13 IST
Last Updated 19 ಆಗಸ್ಟ್ 2021, 7:13 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ    

ಬೆಂಗಳೂರು: ‘ರಾಜ್ಯದಲ್ಲಿ ವಕ್ಫ್ ಆಸ್ತಿ 1,05,885 ಎಕರೆ ಜಮೀನು ಗುರುತಿಸಲಾಗಿದೆ. ಈ ಪೈಕಿ, 32,192 ವಕ್ಫ್ ಆಸ್ತಿ ನೋಂದಣಿಯಾಗಿದೆ. 8,480 ಎಕರೆ ಒತ್ತುವರಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಆದಷ್ಟು ಶೀಘ್ರ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ವಕ್ಫ್ ಮತ್ತು ಹಜ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿ ಸುದ್ದಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ರಾಜ್ಯದ 149 ತಾಲ್ಲೂಕುಗಳ ವಕ್ಫ್ ಆಸ್ತಿ ಗೆಜೆಟ್ ಹೊರಡಿಸಲಾಗಿದೆ. ವಕ್ಫ್ ಇಲಾಖೆಯಲ್ಲಿ ಖಾಲಿ ಇರುವ 84 ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲಾಗುವುದು’ ಎಂದರು.

‘ಹಜ್ ಯಾತ್ರೆಗೆ ಪ್ರತಿ ವರ್ಷ ಹೋಗಲು ಅವಕಾಶ ಇದೆ. ಸೌದಿ ಅರೇಬಿಯಾಕ್ಕೆ ಹೋಗಲು ಬೇಕಾದ ಅವಶ್ಯ ಮಾಹಿತಿಯನ್ನು ಹಜ್ ಮಂಡಳಿ ಮಾಡುತ್ತದೆ. 2019-2021ರಲ್ಲಿ ಕೋವಿಡ್ ಕಾರಣದಿಂದ ಹಜ್ ಯಾತ್ರಿಕರು ಹಜ್ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ, ಹಜ್ ಭವನವನ್ನು ಕೋವಿಡ್‌ ಆರೈಕೆ ಕೇಂದ್ರವಾಗಿ ಮಾಡಿ ಎಲ್ಲ ಸಮುದಾಯದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ವಕ್ಫ್ ಕಮಿಟಿಯಲ್ಲಿ ₹ 105 ಕೋಟಿ ಅನುದಾನ ಇದೆ. ಬಡ ಮುಸ್ಲಿಂ ಸಮುದಾಯದವರಿಗೆ ಶೇ 5 ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮುಸ್ಲಿಂ ಮಹಿಳೆಯರಿಗೆ ಹೃದಯ ಹಾಗೂ ಕ್ಯಾನ್ಸರ್ ರೋಗ ಚಿಕಿತ್ಸೆಗೆ ₹ 1 ಲಕ್ಷ ಸಹಾಯಧನ ನೀಡಲಾಗುವುದು. ವಕ್ಪ್ ಮಂಡಳಿಗೆ ಈ ಸಾರಿ ₹ 1.74 ಕೋಟಿ ಅನುದಾನ ನೀಡಲಾಗಿದೆ. ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ನೀಡುವುದು ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೊಲ್ಲೆ, ‘ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿ ಇನ್ನೂ ನೋಡಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ದೇವಸ್ಥಾನಗಳ ಸಚ್ಚತೆಗೆ ಆದ್ಯತೆ: ‘ರಾಜ್ಯದಲ್ಲಿರುವ ದೇವಸ್ಥಾನಗಳು, ಹೊರರಾಜ್ಯದಲ್ಲಿರುವ ದೇವಸ್ಥಾನಗಳ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು. ದೇವಸ್ಥಾನಗಳ ಆಸ್ತಿ ಸಮೀಕ್ಷೆ ಹಾಗೂ ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ತಿಳಿಸಿದರು.

‘ರಾಜ್ಯದಲ್ಲಿ 34,563 ಮುಜರಾಯಿ ದೇವಸ್ಥಾನಗಳಿವೆ. ವಾರ್ಷಿಕ ₹ 25 ಲಕ್ಷ ವರಮಾನ ಮೀರಿದ ದೇವಸ್ಥಾನಗಳನ್ನು ಎ ಕೆಟಗೆರಿ, ₹ 5 ಲಕ್ಷ ಮೇಲ್ಪಟ್ಟು ವರಮಾನ ಇರುವ ದೇವಸ್ಥಾನಗಳನ್ನು ಬಿ ಹಾಗೂ % 5 ಲಕ್ಷ ಕ್ಕಿಂತ ಕಡಿಮೆ ವರಮಾನ.ಇರುವ ದೇವಸ್ಥಾನಗಳನ್ನು ಸಿ ಕೆಟಗೆರಿಯಲ್ಲಿ ವಿಂಗಡಿಸಲಾಗಿದೆ’ ಎಂದರು.

‘ದೇವಸ್ಥಾನಗಳಲ್ಲಿ ಸ್ವಚ್ಛತೆ ಮತ್ತು ಮೂಲಸೌಲಭ್ಯ ಒದಗಿಸುವ ಕೆಲಸ ಮಾಡಲಾಗುವುದು. ಯಾವ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅವಕಾಶ ಇದೆ ಎಂಬ ಬಗ್ಗೆ ವರದಿ ನೀಡಲು ಸೂಚಿಸಿದ್ದೇನೆ. ಆಂಧ್ರ ಪ್ರದೇಶದ ಶ್ರೀ ಶೈಲಂ, ತಿರುಪತಿ, ಮಹಾಹಾಷ್ಟ್ರದ ಫಂಡರಪುರ, ತುಳಜಾಭವಾನಿ, ಗುಡ್ಡಾಪುರ ದಾನಮ್ಮ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸ ನಿರ್ಮಿಸುವ ಸಂಬಂಧ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಜರಾಯಿ ಇಲಾಖೆಯ ದೇವಸ್ಥಾನಗಳ ಆಸ್ತಿ ಸಮೀಕ್ಷೆಗೂ ಸೂಚಿಸಿದ್ದೇನೆ’ ಎಂದರು.

‘ಹಿಂದಿನ ಮುಜರಾಯಿ ಸಚಿವರು ಸಪ್ತಪದಿ ಯೋಜನೆ ಜಾರಿಗೆ ತಂದಿದ್ದರು. ಅದನ್ನು ಮುಂದುವರೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಪ್ರಚಾರ ಮಾಡಿ ಸಪ್ತಪದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಖಾತೆ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ‘ಖಾತೆ ಬದಲಾವಣೆಯ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಪಕ್ಷದ ನಾಯಕರು ಯಾವ ಜವಾಬ್ದಾರಿ ವಹಿಸುತ್ತಾರೊ ಅದನ್ನು ನಿಭಾಯಿಸುತ್ತೇನೆ. ನಾನು ಅಧ್ಯಾತ್ಮದಲ್ಲಿ ಇರುವುದರಿಂದ ಮುಜರಾಯಿ ಇಲಾಖೆ ಬಗ್ಗೆ ಬೇಸರ ಇಲ್ಲ.

ಹಜ್ ಮತ್ತು ವಕ್ಫ್ ಖಾತೆ ನೀಡಿರುವುದೂ ಖುಷಿ ತಂದಿದೆ. ಎರಡೂ ಇಲಾಖೆಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.