ಲಖನೌ: ಬಾಲಿವುಡ್‌ನ ಖ್ಯಾತ ನಟ ಶತ್ರುಜ್ಞ ಸಿನ್ಹಾ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬೆನ್ನಿಗೇ, ಅವರ ಪತ್ನಿ, ಒಂದು ಕಾಲದ ಮಾಡೆಲ್, ನಟಿ ಪೂನಮ್ ಸಿನ್ಹಾ ಅವರು ಇಂದು ಸಮಾಜವಾದಿ ಪಕ್ಷ ಸೇರಿದ್ದಾರೆ.
ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಶತ್ರುಜ್ಞ ಸಿನ್ಹಾ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದರು. ಕಳೆದ ಐದು ವರ್ಷಗಳಿಂದಲೂ ಮೋದಿ ಆಡಳಿತದ ವಿರುದ್ಧ ಗುಟುರು ಹಾಕುತ್ತಲೇ ಇದ್ದ ಶತ್ರಜ್ಞ ಅವರು ಕಾಂಗ್ರೆಸ್ ಸೇರುವ ಮೂಲಕ ಬಿಜೆಪಿಯೊಂದಿಗಿನ ಮೂರು ದಶಕಗಳಸಂಬಂಧ ಕಡಿದುಕೊಂಡಿದ್ದರು. ಸದ್ಯ ಅವರು ಬಿಹಾರದ ಪಟ್ನಾ ಸಾಹೀಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.ಶತ್ರುಜ್ಞ ಪತ್ನಿ ಪೂನಮ್ ಸಿನ್ಹಾಅವರು ಇಂದು ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಸಮ್ಮುಖದಲ್ಲಿ ಸಮಾಜವಾದಿ ಪಕ್ಷ ಸೇರಿದ್ದು, ಉತ್ತರಪ್ರದೇಶರಾಜಧಾನಿ ಲಖನೌ ಕ್ಷೇತ್ರದಿಂದ ಮಹಾಘಟಬಂಧನದ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.
ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳು ಮಹಾಘಟಬಂಧನ ರಚಿಸಿಕೊಂಡಿವೆ. ಅದರಂತೆ ಉತ್ತರ ಪ್ರದೇಶದ ಲಖನೌ ಕ್ಷೇತ್ರ ಎಸ್‌ಪಿಗೆ ಸಿಕ್ಕಿದೆ. ಸದ್ಯ ಈ ಕ್ಷೇತ್ರದಿಂದ ಕಳೆದ ಬಾರಿ ಕೇಂದ್ರ ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ಆಯ್ಕೆಯಾಗಿದ್ದು, ಅವರ ವಿರುದ್ಧ ಪೂನಮ್ ಸಿನ್ಹಾ ಅವರನ್ನು ಮಹಾಘಟಬಂಧನದ ಅಭ್ಯರ್ಥಿಯನ್ನಾಗಿ ಮಾಡಲು ಬಹುತೇಕ ನಿರ್ಧರಿಸಲಾಗಿದೆ ಎನ್ನುತ್ತಿವೆ ಮೂಲಗಳು.
ಲಖನೌ, ಉತ್ತರ ಪ್ರದೇಶದ ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದು. 1991ರಿಂದಲೂ ಬಿಜೆಪಿಯ ಹಿಡಿತದಲ್ಲಿದೆ. 1991ರಿಂದ 2009ರ ವರೆಗೆ ಈ ಕ್ಷೇತ್ರವನ್ನು ದಿವಂಗತ ವಾಜಪೇಯಿ ಅವರು ಪ್ರತಿನಿಧಿಸಿದ್ದರು. ಸದ್ಯ ಈಗ ರಾಜನಾಥ್ ಸಿಂಗ್ ಅವರು ಪ್ರತಿನಿಧಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿ ಹಾಕುವ ಸಾಧ್ಯತೆಗಳು ಕಡಿಮೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.