ಬೆಂಗಳೂರು: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಎಸ್‌ಎಚ್‌ಡಿಪಿ) ಐದನೇ ಹಂತದ ಮೊದಲನೇ ಘಟ್ಟದಲ್ಲಿ ₹4,000 ಕೋಟಿ ವೆಚ್ಚದ ಕಾಮಗಾರಿಗಳಿಗೆ ತಾಂತ್ರಿಕ ಬಿಡ್ ತೆರೆದು ಎರಡು ತಿಂಗಳಾದರೂ ಆರ್ಥಿಕ ಬಿಡ್ ತೆರೆದಿಲ್ಲ. ಟೆಂಡರ್ ಆಹ್ವಾನ ಪ್ರಾಧಿಕಾರದ ಅಧಿಕಾರಿಗಳ ವಿಳಂಬ ಧೋರಣೆಯಿಂದ ಗುತ್ತಿಗೆದಾರರು ಹೈರಾಣಾಗಿದ್ದಾರೆ.
ಟೆಂಡರ್ ಆಹ್ವಾನ ಪ್ರಾಧಿಕಾರದಲ್ಲಿರುವ ಒಂದು ಗುಂಪಿನ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಕುರಿತು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರ ಬಳಿ ಗುತ್ತಿಗೆದಾರರು ದೂರು ಒಯ್ದಿದ್ದರು. ಜೂನ್ ಮೊದಲ ವಾರ ಸಭೆ ನಡೆಸಿದ್ದ ಸಚಿವರು, ಹತ್ತು ದಿನಗಳೊಳಗೆ ತಾಂತ್ರಿಕ ಬಿಡ್ ಪರಿಶೀಲನೆ ಪೂರ್ಣಗೊಳಿಸಿ, ಆರ್ಥಿಕ ಬಿಡ್ ತೆರೆಯುವಂತೆ ನಿರ್ದೇಶನ ನೀಡಿದ್ದರು. ಸಚಿವರ ನಿರ್ದೇಶನಕ್ಕೆ ಕಿಮ್ಮತ್ತು ನೀಡದ ಅಧಿಕಾರಿಗಳು, ಆ ಬಳಿಕ ತಿಂಗಳು ಕಳೆದರೂ ತಾಂತ್ರಿಕ ಬಿಡ್ ಪರಿಶೀಲನೆಯ ಹಂತದಲ್ಲೇ ಇದ್ದಾರೆ.
ಎಸ್‌ಎಚ್‌ಡಿಪಿ ಐದನೇ ಹಂತದಲ್ಲಿ ಎರಡು ಘಟ್ಟಗಳಲ್ಲಿ ₹9,000 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಮೊದಲ ಘಟ್ಟದಲ್ಲಿ 204 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 1,200 ಕಿಲೋಮೀಟರ್ ಉದ್ದದ ರಸ್ತೆಗಳನ್ನು ₹4,000 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಟೆಂಡರ್ ಪ್ರಕ್ರಿಯೆಯನ್ನು ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಆರಂಭಿಸಲಾಗಿತ್ತು. ಮೇ 8 ರಂದು ತಾಂತ್ರಿಕ ಬಿಡ್‌ಗಳನ್ನು ತೆರೆಯಲಾಗಿತ್ತು.
ಸ್ಪಷ್ಟ ಕಾರಣವೇ ಇಲ್ಲ: ‘ತಾಂತ್ರಿಕ ಬಿಡ್ ದಾಖಲೆಗಳ ಪರಿಶೀಲನೆಯ ನೆಪದಲ್ಲೇ ಎಸ್‌ಎಚ್‌ಡಿಪಿ ಟೆಂಡರ್ ಆಹ್ವಾನ ಪ್ರಾಧಿಕಾರದ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ವಿಳಂಬಕ್ಕೆ ಸ್ಪಷ್ಟ ಕಾರಣವನ್ನೇ ನೀಡುತ್ತಿಲ್ಲ. ಎರಡು ತಿಂಗಳಿನಿಂದ ಎಸ್‌ಎಚ್‌ಡಿಪಿ ಕಚೇರಿಗೆ ಅಲೆದೂ, ಅಲೆದೂ ಸಾಕಾಗಿದೆ’ ಎಂದು ಬಿಡ್ ಸಲ್ಲಿಸಿ ಕಾಯುತ್ತಿರುವ ಕೆಲವು ಗುತ್ತಿಗೆದಾರರು ದೂರುತ್ತಾರೆ.
‘ಸಮರ್ಪಕವಾಗಿ ದಾಖಲೆ ಸಲ್ಲಿಸದ ಅಥವಾ ಅರ್ಹತೆ ಇಲ್ಲದ ಗುತ್ತಿಗೆದಾರರು ಬಿಡ್ ಸಲ್ಲಿಸಿರುವ ಪ್ರಕರಣಗಳಲ್ಲಿ ಪರಿಶೀಲನೆಗಾಗಿ ಕೆಲವು ದಿನ ವಿಳಂಬ ಆಗಬಹುದು. ಆದರೆ, ಎಲ್ಲ ದಾಖಲೆಗಳೂ ಸಮರ್ಪವಾಗಿ ಇರುವ ಪ್ರಕರಣಗಳಲ್ಲಿ ವಿಳಂಬ ಮಾಡುತ್ತಿರುವುದರ ಹಿಂದಿರುವ ಉದ್ದೇಶ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಜತೆ ಮಾತನಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ‘ಎಸ್‌ಎಚ್‌ಡಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಕೂಟವೊಂದು ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ನಮ್ಮ ಬಳಿಯೂ ಕೆಲವರು ದೂರಿದ್ದಾರೆ. ತಾಂತ್ರಿಕ ಬಿಡ್ ತೆರೆದು ಎರಡು ತಿಂಗಳಾದರೂ ಆರ್ಥಿಕ ಬಿಡ್ ತೆರೆಯದಿರುವುದರ ಹಿಂದಿನ ಉದ್ದೇಶವೇ ಭ್ರಷ್ಟಾಚಾರ. ಅಧಿಕಾರಿಗಳ ಬೇಡಿಕೆಗೆ ಗುತ್ತಿಗೆದಾರರನ್ನು ಒಪ್ಪಿಸಲು ಈ ಹಾದಿ ಹಿಡಿದಿದ್ದಾರೆ’ ಎಂದು ಆರೋಪಿಸಿದರು.
‘ಟೆಂಡರ್ ಪ್ರಕ್ರಿಯೆಗೆ ವೇಗ’: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ. ಸತ್ಯನಾರಾಯಣ, ‘ಹತ್ತು ದಿನಗಳೊಳಗೆ ತಾಂತ್ರಿಕ ಬಿಡ್ ಪರಿಶೀಲನೆಗೆ ಸಚಿವರು ಸೂಚಿಸಿರುವುದು ನಿಜ. ಆದರೆ, ದಾಖಲೆಗಳ ಪರಿಶೀಲನೆ ವಿಳಂಬವಾದ ಕಾರಣ ಆರ್ಥಿಕ ಬಿಡ್ ತೆರೆಯಲು ಸಾಧ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆಗೆ ವೇಗ ನೀಡಿದ್ದೇವೆ’ ಎಂದು ಹೇಳಿದರು.
‘ಭ್ರಷ್ಟಾಚಾರ, ಗುತ್ತಿಗೆದಾರರ ಕಿರುಕುಳದ ಕುರಿತು ನಮಗೆ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ’ ಎಂದರು.
ಈಗ ಎಸ್‌ಎಚ್‌ಡಿಪಿ ಟೆಂಡರ್ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಅಧಿಕಾರಿಗಳ ಕೂಟ ಸಚಿವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ಈ ಅಧಿಕಾರಿಗಳೇ ಸಚಿವರಿಗೆ ಕಳಂಕ ತರಲು ಹೊರಟಿದ್ದಾರೆಡಿ. ಕೆಂಪಣ್ಣ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ
ಎಸ್‌ಎಚ್‌ಡಿಪಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು 2023ರ ಡಿಸೆಂಬರ್‌ನಲ್ಲಿ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಉತ್ತರ ವಲಯ (ಬೆಳಗಾವಿ) ಕಚೇರಿಗೆ ಮರು ಹೊಂದಾಣಿಕೆ ಮಾಡಲಾಗಿತ್ತು. ಈಗ ಮಂಜೂರಾತಿಯೇ ಇಲ್ಲದ ಈ ಹುದ್ದೆಯ ಪ್ರಭಾರವನ್ನು ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆಯ (ಕೆಶಿಪ್) ಯೋಜನಾ ನಿರ್ದೇಶಕ ಪುರುಷೋತ್ತಮ ದಾಸ್ ಹೆಗ್ಗಡೆ ಅವರಿಗೆ ವಹಿಸಿದ್ದು ಅವರೇ ಟೆಂಡರ್ ನಿರ್ವಹಣಾ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಮಂಜೂರಾತಿಯೇ ಇಲ್ಲದ ಹುದ್ದೆಗೆ ಮತ್ತೊಂದು ಹುದ್ದೆಯಲ್ಲಿರುವವರನ್ನು ಪ್ರಭಾರಿಯಾಗಿ ನೇಮಿಸಿ ಟೆಂಡರ್ ಪ್ರಕ್ರಿಯೆ ನಡೆಸುವುದು ಸರಿಯಲ್ಲ. ಹುದ್ದೆಯ ಮಂಜೂರಾತಿಯೇ ಇಲ್ಲದಿರುವಾಗ ಟೆಂಡರ್‌ನಲ್ಲಿ ಅಕ್ರಮಗಳು ನಡೆದರೆ ಆ ಅಧಿಕಾರಿಯನ್ನು ಹೊಣೆ ಮಾಡಲು ಹೇಗೆ ಸಾಧ್ಯ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿಗಳು. ಈ ಕುರಿತು ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ. ಸತ್ಯನಾರಾಯಣ ‘ಎಸ್‌ಎಚ್‌ಡಿಪಿಯಲ್ಲಿ ಮುಖ್ಯ ಎಂಜಿನಿಯರ್ ಹುದ್ದೆಯ ಮಂಜೂರಾತಿ ಇಲ್ಲದಿರುವುದು ನಿಜ. ನಿಯಮಗಳ ಪ್ರಕಾರ ಆಯಾ ಘಟಕಗಳ ಮುಖ್ಯ ಎಂಜಿನಿಯರ್ ಅವರೇ ಟೆಂಡರ್ ಆಹ್ವಾನ ಪ್ರಾಧಿಕಾರಿ. ಆದರೆ ಅನಿವಾರ್ಯ ಕಾರಣದಿಂದ ಕೆಶಿಪ್ ಯೋಜನಾ ನಿರ್ದೇಶಕರಿಗೆ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.