ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರು 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾನಪದ ಸಂಗೀತ ವಿಭಾಗದಲ್ಲಿ ಅವರಿಗೆ ಪ್ರಶಸ್ತಿ ದೊರೆತಿದೆ.
ಪಿಂಡಿಪಾಪನಹಳ್ಳಿಯ ಪಾಪಣ್ಣ ಮತ್ತು ಮುನಿಗಂಗಮ್ಮ ಅವರ ಪುತ್ರ ಮುನಿವೆಂಕಟಪ್ಪ ಇಡೀ ಬದುಕನ್ನು ಕಡು ಬಡತನದಲ್ಲಿಯೇ ಕಳೆದವರು. ನಾಲ್ಕನೇ ತರಗತಿಯವರೆಗೆ ಕಲಿತಿರುವ ಅವರು, ತಂದೆಯಿಂದ ತಮಟೆ ವಾದನ ಕಲಿತರು. ಅದು ಅವರನ್ನು ಹಳ್ಳಿಯಿಂದ ದೆಹಲಿಯವರೆಗೆ ಕರೆದೊಯ್ಯಲಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ನಾಡೋಜ’ ಗೌರವ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಡಾ.ಎಲ್.ಬಸವರಾಜು ಪ್ರತಿಷ್ಠಾನ ಪ್ರಶಸ್ತಿ ಅವರಿಗೆ ಸಂದ ಪ್ರಮುಖ ಪ್ರಶಸ್ತಿಗಳು. ಮುನಿವೆಂಕಟಪ್ಪ ಈ ಹಿಂದೆ ಜಾನಪದ ಅಕಾಡೆಮಿಯ ಸದಸ್ಯರೂ ಆಗಿದ್ದರು. ರಾಜ್ಯವಷ್ಟೇ ಅಲ್ಲ ಜಪಾನ್ ಸೇರಿದಂತೆ ವಿವಿಧ ದೇಶಗಳಲ್ಲಿಯೂ ಅವರ ತಮಟೆ ಸದ್ದು ಮೊಳಗಿದೆ.
ತಾಯಿ ಒಲಿದರೆ ಪ್ರಶಸ್ತಿ: ‘ನಾಡೋಜ’ ಬಂದಿದ್ದಾಗ ಒಂದು ರೀತಿಯಲ್ಲಿ ಖುಷಿ ಆಗಿತ್ತು. ಈಗ ಸಾಯುವ ಕಾಲದಲ್ಲಿ ಈ ಪ್ರಶಸ್ತಿ ಬಂದಿದ್ದು ಮತ್ತಷ್ಟು ಖುಷಿ ತಂದಿದೆ. ಕಷ್ಟಪಟ್ಟರೆ ಖುಷಿ ಸಿಕ್ಕೇ ಸಿಗುತ್ತದೆ. ಕಷ್ಟ ಬಿದ್ದರೆ ಆ ತಾಯಿ (ತಮಟೆ) ಒಲಿಯುತ್ತಾರೆ. ಆ ತಾಯಿ ಒಲಿದರೆ ನಮಗೆ ಇಂತಹ ಗೌರವ, ಪ್ರಶಸ್ತಿಗಳೆಲ್ಲ ಸಿಗುತ್ತವೆ ಎಂದು ಮುನಿವೆಂಕಟಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.