ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ‘ಕಮಲ’ದ ಭದ್ರಕೋಟೆಯಲ್ಲಿ ಈ ಬಾರಿ ‘ಕೈ’ ಬಾವುಟ ಹಾರಿಸಿದೆ.
ನಾಲ್ಕು ಅವಧಿಯಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಕೈ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಾಸೀರ ಅಹಮದ್ ಖಾನ್ ಪಠಾಣ ಯಶಸ್ವಿಯಾಗಿದ್ದಾರೆ. ಅಂತಿಮ 18ನೇ ಸುತ್ತು ಮುಕ್ತಾಯವಾಗಿದೆ.
ಕಾಂಗ್ರೆಸ್‌ಗೆ 13,448 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಗೆಲುವು ತನ್ನದಾಗಿಸಿಕೊಂಡಿದೆ.
ಕಾಂಗ್ರೆಸ್‌ನ ಯಾಸೀರ ಅಹಮದ್ ಖಾನ್ ಪಠಾಣ ಅವರು 1,00,587 ಮತ ಪಡೆದಿದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ ಅವರ ಮಗನಾದ ಬಿಜೆಪಿಯ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು 86,960 ಮತ ಪಡೆದು ಪರಾಭವಗೊಂಡಿದ್ದಾರೆ.
ಶೇ 80.72ರಷ್ಟು ಮತದಾನ
ನವೆಂಬರ್ 13ರಂದು ಮತದಾನ ನಡೆದಿದ್ದು, 1.91 ಲಕ್ಷ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ. 80.72ರಷ್ಟು ಮತದಾನ ಪ್ರಮಾಣ ದಾಖಲಾಗಿದ್ದು, ಮತದಾರರ ಅಂತಿಮ ತೀರ್ಪು ಇಂದು ಪ್ರಕಟಗೊಂಡಿದೆ.
‘ಕಮಲ’ದ ಕೋಟೆಯಲ್ಲಿ ಮೇಲಾಗುತ್ತಾ ‘ಕೈ’
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಸೀರ ಅಹಮದ್ ಖಾನ್ ಪಠಾಣ ಪರವಾಗಿ ಇಡೀ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ಪ್ರಚಾರ ಮಾಡಿದೆ. ಕಳೆದ ಬಾರಿ ಸೋಲು ಅನುಭವಿಸಿದ್ದ ಪಠಾಣ, ಈ ಬಾರಿ ಗ್ಯಾರಂಟಿ ಯೋಜನೆ ಹಾಗೂ ಅನುಕಂಪದ ಮೇಲೆ ಮತ ಕೇಳಿದ್ದರು. ತಂದೆಯ ಅಭಿವೃದ್ಧಿ ಕೆಲಸಗಳು ಹಾಗೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಈ ಬಾರಿ ಭರತ್ ಬೊಮ್ಮಾಯಿ ಅವರಿಗೆ ಗೆಲುವಿನ ಅವಕಾಶಗಳು ಹೆಚ್ಚಿವೆ ಎಂದು ಅಂದಾಜಿಸಲಾಗಿತ್ತು. ನಾಲ್ಕು ಬಾರಿ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ, ಕ್ಷೇತ್ರದ ಪ್ರಮುಖ ಮುಖಂಡರ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡಿದ್ದರು. ಬಂಡಾಯದ ನಡುವೆಯೂ ಮುಖಂಡರ ಮನವೊಲಿಸುವಲ್ಲಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದರು. ಬಂಕಾಪುರದಲ್ಲಿ ಮುಸ್ಲಿಂ ಸಮುದಾಯದವರ ಸಭೆ ನಡೆಸಿದ್ದ ಅವರು, ‘ನಿಮ್ಮೊಂದಿಗೆ ನಾನಿದ್ದೇನೆ. ಮಗನನ್ನು ಗೆಲ್ಲಿಸಿ’ ಎಂದು ಕೋರಿದ್ದರು.
ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು–ಶಾಸಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿಗಳ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಬೆವರು ಸುರಿಸಿದ್ದರು.
ಶಿಗ್ಗಾವಿ ಉಪಚುನಾವಣೆ
ಶಿಗ್ಗಾವಿ ಉಪಚುನಾವಣೆ
ಶಿಗ್ಗಾವಿ ಉಪಚುನಾವಣೆ
ಶಿಗ್ಗಾವಿ ಉಪಚುನಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.