ADVERTISEMENT

ಶಿವಮೊಗ್ಗ: ಬಿಎಸ್‌ವೈ ಮಗನ ವಿರುದ್ಧ ಈಶ್ವರಪ್ಪ‍ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 0:09 IST
Last Updated 16 ಮಾರ್ಚ್ 2024, 0:09 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಬೆಂಗಳೂರು: ಬಿಜೆಪಿಯಲ್ಲಿ ಟಿಕೆಟ್ ಬೇಗುದಿ ತಾರಕಕ್ಕೇರಿದ್ದು, ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.

ಈ ಕ್ಷೇತ್ರದಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪನವರ ಮಗ, ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷ ಘೋಷಿಸಿದೆ. 

ಶುಕ್ರವಾರ ಸಂಜೆ ಶಿವಮೊಗ್ಗದಲ್ಲಿ ನಡೆದ ‘ಅಭಿಪ್ರಾಯ ಸಂಗ್ರಹಣಾ ಸಭೆ’ಯಲ್ಲಿ ಈಶ್ವರಪ್ಪ ಈ ನಿರ್ಧಾರ ಪ್ರಕಟಿಸಿದ್ದಾರೆ. ‘ಇದು ಉದ್ವೇಗದ ತೀರ್ಮಾನ ಅಲ್ಲ. ಕಾಂಗ್ರೆಸ್‌ ಪಕ್ಷದ ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡು ಬಂದಿದ್ದೆವು. ಈಗ ಯಡಿಯೂರಪ್ಪ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡುವುದು ಎಷ್ಟು ಸರಿ? ಪಕ್ಷವನ್ನು ಕುಟುಂಬ ರಾಜಕಾರಣದ ಹಿಡಿತದಿಂದ ಬಿಡಿಸಲು ಹೋರಾಟ ಆರಂಭಿಸಿದ್ದೇನೆ’ ಎಂದು ಈಶ್ವರಪ್ಪ ಹೇಳಿದರು.

ADVERTISEMENT

‘ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಬಿ.ವೈ.ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್ ಅವರಿಗಿಂತ ಗುಲಗಂಜಿಯಷ್ಟಾದರೂ ತೂಕದಲ್ಲಿ ಹೆಚ್ಚಿದ್ದೇನೆ. ಹೀಗಾಗಿ ಪ್ರಧಾನಿ ನರೆಂದ್ರ ಮೋದಿ ಅವರ ಪರವಾಗಿ ಚುನಾವಣೆಗೆ ನಿಲ್ಲುತ್ತಿರುವೆ. ಸಿದ್ಧಾಂತ ಉಳಿಸಬೇಕು. ಬಿಜೆಪಿ ಮತ್ತೊಂದು ಕಾಂಗ್ರೆಸ್ ಪಕ್ಷ ಆಗದಂತೆ ತಡೆಯಬೇಕು ಎಂಬ ಕಾರಣಕ್ಕೇ ಈ ಸ್ಪರ್ಧೆ’ ಎಂದು ಅವರು ತಿಳಿಸಿದರು.

ಈ ಮಧ್ಯೆ ಶಿವಮೊಗ್ಗಕ್ಕೆ ಬೆಳಿಗ್ಗೆ ಭೇಟಿ ನೀಡಿದ್ದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು, ‘ಈಶ್ವರಪ್ಪ ಅವರಿಗೆ ಅನ್ಯಾಯವಾಗಿದೆ. ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಟಿಕೆಟ್‌ ಬದಲಾವಣೆಗೆ ಇನ್ನೂ ಅವಕಾಶವಿದೆ. ಕೆ.ಇ.ಕಾಂತೇಶ್ ಅವರಿಗೆ ಟಿಕೆಟ್‌ ಕೊಡುವಂತೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುತ್ತೇನೆ. ಈಶ್ವರಪ್ಪ ಅವರ ಮನವೊಲಿಸುವ ಕೆಲಸ ಮಾಡಿದ್ದೇನೆ’ ಎಂದು ಹೇಳಿದ್ದರು.

ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಸ್ಥಳೀಯವಾಗಿ ಸಂಜಯ ಪಾಟೀಲ ಹಾಲಿ ಸಂಸದೆ ಮಂಗಳ ಅಂಗಡಿ ಇದ್ದಾರೆ. ಸ್ಥಳೀಯರಿಗೆ ಟಿಕೆಟ್ ನೀಡಬೇಕು
- ರಮೇಶ ಜಾರಕಿಹೊಳಿ ಬಿಜೆಪಿ ಶಾಸಕ

ನಡು ನೀರಿನಲ್ಲಿ ಕೈಬಿಟ್ಟ ಯಡಿಯೂರಪ್ಪ: ಮಾಧುಸ್ವಾಮಿ

‘ಯಡಿಯೂರಪ್ಪ ಈಗ ನನ್ನನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ. ತಮಗೆ ಬೇಕಾದ ಎರಡು– ಮೂರು ಕ್ಷೇತ್ರಗಳನ್ನು ಹಟ ಮಾಡಿ ತೆಗೆದುಕೊಂಡಿದ್ದಾರೆ. ತುಮಕೂರಿಗೆ ಅಭ್ಯರ್ಥಿಯಾಗುವ ನಮ್ಮ ಕ್ಷೇತ್ರದವರಲ್ಲದ ಸೋಮಣ್ಣ ಪರ ಪ್ರಚಾರ ಮಾಡುವುದಿಲ್ಲ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

‘ನಾನು ದೆಹಲಿಗೆ ಹೋಗುವುದನ್ನು ತಡೆದಿದ್ದರು. ಸೋಮಣ್ಣನ ನಾಲಿಗೆಗೆ, ಬೈಗುಳಕ್ಕೆ ಹೆದರಿಕೊಂಡು ನನ್ನನ್ನು ಬಲಿ ಮಾಡಿರಬಹುದು ಎಂಬ ನೋವು ನನಗಿದೆ. ಚುನಾವಣೆ ದಿನಾಂಕ ಘೋಷಣೆ ಆದ ಬಳಿಕ ಕಾರ್ಯಕರ್ತರ ಸಭೆ ಸೇರಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.