ಬೆಂಗಳೂರು: ಹಾಸನ ಜಿಲ್ಲೆ ಶಿರಾಡಿ ಘಾಟಿಯ ದೋಣಿಗಾಲ್ ಬಳಿ ಭೂಕುಸಿತ ಆಗಿರುವುದರಿಂದ ತಕ್ಷಣವೇ ಅಲ್ಲಿ ವಾಹನಗಳಿಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಲೊಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಇತ್ತೀಚಿನ ಮಳೆ ಮತ್ತು ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ಘಟ್ಟ ಪ್ರದೇಶಗಳಲ್ಲಿನ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳ ಜತೆ ಮಂಗಳವಾರ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸುಮಾರು ಎರಡೂವರೆ ಕಿ.ಮೀ. ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಬೆಂಗಳೂರಿನಿಂದ ಮಂಗಳೂರು ಕಡೆ ಹೋಗುವ ವಾಹನಗಳು ಶಿರಾಡಿ ಘಾಟಿಯ ಈಗಿನ ರಸ್ತೆಯಲ್ಲೇ ಹೋಗಲು ಅವಕಾಶ ನೀಡಲಾಗುವುದು. ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಬರುವ ವಾಹನಗಳು ದೋಣಿಗಾಲ್ ಹತ್ತಿರದ ಕಪ್ಪಳ್ಳಿ–ಕೆಸಗಾನ ಹಳ್ಳಿ ಮಾರ್ಗವಾಗಿ ಹಳೆಯ ರಸ್ತೆ ಇದ್ದು ಅದನ್ನು ಬಳಸಬೇಕು. ಈ ರಸ್ತೆಯನ್ನು ತಾತ್ಕಾಲಿಕವಾಗಿ ವಿಸ್ತರಿಸಿ ಪರ್ಯಾಯ ರಸ್ತೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಏಕಮುಖ ಸಂಚಾರಕ್ಕೆ ಕೂಡಲೇ ಆದೇಶ ಮಾಡಲು ಹಾಸನ ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗಿದೆ. ದೋಣಿಗಾಲ್ ಬಳಿ ಕಾರ್ಮಿಕರು, ರಸ್ತೆ ನಿರ್ಮಾಣದ ಕಚ್ಚಾ ಸಾಮಗ್ರಿಗಳು, ಯಂತ್ರೋಪಕರಣಗಳು ಸಿದ್ಧವಾಗಿಟ್ಟುಕೊಂಡು ತ್ವರಿತ ಕಾಮಗಾರಿಗೆ ಸೂಚಿಸಲಾಗಿದೆ ಎಂದರು.
‘ಏಕಮುಖ ಸಂಚಾರ ತಾತ್ಕಾಲಿಕವಾಗಿದ್ದು, ದೋಣಿಗಾಲ್ ಬಳಿ ರಸ್ತೆ ಸರಿಪಡಿಸಿದ ನಂತರ ಯಥಾ ಪ್ರಕಾರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಈ ಕಾಮಗಾರಿಯನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಶಿರಾಡಿ ಘಾಟಿ ರಸ್ತೆ ದುರಸ್ತಿ ಕಾರ್ಯ ತಡವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಹಲವು ಕಾರಣಗಳಿವೆ. ಈ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ತಿಳಿಸಿದ್ದೇವೆ. ಅಗತ್ಯವಿದ್ದರೆ ಕೇಂದ್ರ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನೂ ಭೇಟಿ ಮಾಡಿ ಕಾಮಗಾರಿ ತ್ವರಿತಗೊಳಿಸಲು ಒತ್ತಡ ಹೇರಲಾಗುವುದು’ ಎಂದು ಪಾಟೀಲ ತಿಳಿಸಿದರು.
ಶಿರಾಡಿ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು 2023ರ ಮಾರ್ಚ್‌ಗೆ ಸಮಯ ವಿಸ್ತರಿಸಲಾಗಿದೆ. ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಘಾಟ್ ಒಟ್ಟು 39 ಕಿ.ಮೀ ಉದ್ದವಿದ್ದು, ಇದರಲ್ಲಿ 20 ಕಿ.ಮೀ ಭಾಗವು ರಾಷ್ಟ್ರೀಯ ಹೆದ್ದಾರಿ ವಲಯದ ವಶದಲ್ಲಿದ್ದು, ಉತ್ತಮ ಸ್ಥಿತಿಯಲ್ಲಿದೆ. ಉಳಿದ 19 ಕಿ.ಮೀ (ಮಾರನಹಳ್ಳಿಯಿಂದ ಸಕಲೇಶಪುರ ಭಾಗ) ವ್ಯಾಪ್ತಿಯಲ್ಲಿ ಕಾಮಗಾರಿ ಕುಂಠಿತವಾಗಿದೆ. ಇದಕ್ಕೆ ₹200 ಕೋಟಿ ಅಗತ್ಯವಿದ್ದು, ಜಿಎಸ್‌ಟಿ ವಿನಾಯ್ತಿ ನೀಡಿ, ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.