ADVERTISEMENT

ಶಿರಾಡಿ ಘಾಟಿ: ಚತುಷ್ಫತ ಕಾಮಗಾರಿಗೆ ₹1,976 ಕೋಟಿ ಟೆಂಡರ್‌

23 ಕಿ.ಮೀ ಸುರಂಗ ನಿರ್ಮಾಣಕ್ಕೆ ಏಪ್ರಿಲ್‌ನಲ್ಲಿ ಅಂತಿಮಗೊಳ್ಳಲಿದೆ ಡಿಪಿಆರ್‌: ಗಡ್ಕರಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 15:33 IST
Last Updated 2 ಜನವರಿ 2023, 15:33 IST
   

ಮಂಗಳೂರು: 'ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ರಾಷ್ಟ್ರೀಯ ಹೆದ್ದಾರಿ 75 ಅನ್ನು ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ₹ 1,976 ಕೋಟಿ ಟೆಂಡರ್‌ ಆಹ್ವಾನಿಸಲಾಗಿದೆ' ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್‌ ಕಟೀಲ್ ಅವರಿಗೆ ಪತ್ರ ಬರೆದಿರುವ ಅವರು, ‘‌ಈ ಚತುಷ್ಪಥ ಕಾಮಗಾರಿಯ ಜೊತೆಗೆ, ಮಂಗಳೂರು- ಬೆಂಗಳೂರು ನಡುವಿನ ಸಂಚಾರಕ್ಕೆ ತಗಲುವ ಪ್ರಯಾಣ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಶಿರಾಡಿ ಘಾಟಿಯಲ್ಲಿ 23 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವೂ ಇದೆ. ₹15 ಸಾವಿರ ಕೋಟಿ ವೆಚ್ಚದ ಈ ಕಾಮಗಾರಿಗೆ 2023ರ ಏಪ್ರಿಲ್ ಒಳಗೆ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್) ಅಂತಿಮಗೊಳಿಸಿ, ಮೇ, ತಿಂಗಳಿನಲ್ಲೇ ಟೆಂಡರ್‌ ಆಹ್ವಾನಿಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

‘ಸಕಲೇಶಪುರದಿಂದ ಮಾರನಹಳ್ಳಿಯವರೆಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹೆದ್ದಾರಿಯನ್ನು ತಕ್ಷಣವೇ ದುರಸ್ತಿ ಪಡಿಸಲಾಗುತ್ತದೆ. ದುರಸ್ತಿ ಕಾಮಗಾರಿಗೆ ₹ 12.20 ಕೋಟಿ ಅಂದಾಜು ವೆಚ್ಚವಾಗಲಿದೆ. ಇದರ ಟೆಂಡರ್‌ಗಳ ಮೌಲ್ಯಮಾಪನ ಮಾಡಲಾಗುತ್ತಿದೆ. ಗುಂಡಿ ಮುಚ್ಚುವ ಕಾಮಗಾರಿಯನ್ನು ಈ ಗುತ್ತಿಗೆದಾರರೇ ನಿರ್ವಹಿಸಲಿದ್ದಾರೆ’ ಎಂದು ಗಡ್ಕರಿ ಅವರು ನಳಿನ್ ಅವರಿಗೆ 2022ರ ಡಿ.20ರಂದು ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.