ADVERTISEMENT

ಶಿರಾಡಿ ಘಾಟಿ ರಸ್ತೆ: ಮಣ್ಣು ತೆರವು, ತಾತ್ಕಾಲಿಕ ತಡೆಗೋಡೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2018, 19:26 IST
Last Updated 26 ಆಗಸ್ಟ್ 2018, 19:26 IST
26ಯುಪಿಡಿ-2: ಶಿರಾಡಿ ಘಾಟಿ ರಸ್ತೆಯಲ್ಲಿ ಬರ್ಚಿನಹಳ್ಳ ಎಂಬಲ್ಲಿ ತಡೆಗೋಡೆ ಕುಸಿದು ಹೊಳೆಗೆ ಬಿದ್ದಿದ್ದು, ರಕ್ಷಣಾತ್ಮಕವಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ.(ಉಪ್ಪಿನಂಗಡಿ ಚಿತ್ರ).
26ಯುಪಿಡಿ-2: ಶಿರಾಡಿ ಘಾಟಿ ರಸ್ತೆಯಲ್ಲಿ ಬರ್ಚಿನಹಳ್ಳ ಎಂಬಲ್ಲಿ ತಡೆಗೋಡೆ ಕುಸಿದು ಹೊಳೆಗೆ ಬಿದ್ದಿದ್ದು, ರಕ್ಷಣಾತ್ಮಕವಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ.(ಉಪ್ಪಿನಂಗಡಿ ಚಿತ್ರ).   

ನೆಲ್ಯಾಡಿ(ಉಪ್ಪಿನಂಗಡಿ): ಶಿರಾಡಿ ಘಾಟಿ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಹಾಗೂ ಹೊಳೆ ಬದಿಯಲ್ಲಿ ತಡೆಗೋಡೆ ಕುಸಿತ ಆಗಿರುವಲ್ಲಿ ರಸ್ತೆಗೆ ಬಿದ್ದಿರುವ ಮಣ್ಣು, ಕಲ್ಲು ಬಂಡೆಗಳ ತೆರವು ಮತ್ತು ಹೊಳೆ ಬದಿಯಲ್ಲಿ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ರಕ್ಷಣಾತ್ಮಕ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಲಘು ವಾಹನ ಸಂಚಾರ ಮುಕ್ತಗೊಳಿಸಲು ಸಿದ್ಧತೆ ನಡೆಯುತ್ತಿರುವುದು ಕಂಡು ಬಂದಿದೆ.

ಕಳೆದ 3 ತಿಂಗಳಿನಿಂದ ಶಿರಾಡಿ ಘಾಟಿ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ಅಲ್ಲಲ್ಲಿ ಬೆಟ್ಟ, ಗುಡ್ಡಗಳು ಕುಸಿತವಾಗಿದ್ದವು. ಅದಾಗ್ಯೂ ಕೆಲವು ಕಡೆಯಲ್ಲಿ ಕಲ್ಲು ಬಂಡೆಗಳು, ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಇವುಗಳ ತೆರವು ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಗುಂಡ್ಯದಿಂದ ಮಾರನಹಳ್ಳಿ ತನಕ ರಸ್ತೆಗೆ ಬಿದ್ದಿರುವುದನ್ನು ತೆರವು ಮಾಡಲಾಗಿದೆ. ಆದರೆ ದೋಣಿಗಲ್ ಸಮೀಪ ರಸ್ತೆಗೆ ಬಿದ್ದಿರುವ ಮಣ್ಣು ಮತ್ತು ಬಂಡೆಕಲ್ಲುಗಳು ಹಾಗೇ ಉಳಿಕೆಯಾಗಿದ್ದು, ಇಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿರುವುದು ಕಂಡು ಬಂದಿದೆ.

ಕಳೆದ 5 ದಿನಗಳಿಂದ ಈ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಗುಡ್ಡ, ಬೆಟ್ಟ ಜರಿದು ಬೀಳುವ ಘಟನೆಗಳು ನಿಂತಿದ್ದು, ಹೀಗಾಗಿ ಈಗಾಗಲೇ ರಸ್ತೆಗೆ ಬಿದ್ದು, ವಾಹನ ಸಂಚಾರಕ್ಕೆ ತಡೆ ಉಂಟಾಗಿರುವುದನ್ನು ಶಿರಾಡಿ ಘಾಟಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಸಿರುವ ಓಷಿಯನ್ ಕನ್‌ಸ್ಟ್ರಷನ್ ಸಂಸ್ಥೆ ತನ್ನ ಯಂತ್ರಗಳ ಮೂಲಕ ತೆರವು ಮಾಡಿರುತ್ತದೆ. ಈ ಪೈಕಿ ಘಾಟಿ ಪ್ರದೇಶದಿಂದ ಹೊರಗೆ ಇರುವ ಸಕಲೇಶಪುರ ಸಮೀಪದಲ್ಲಿ ದೋಣಿಗಲ್ ಸಮೀಪದಲ್ಲಿ, 10 ದಿನಗಳ ಹಿಂದೆ ಟ್ಯಾಂಕರ್ ಪಲ್ಟಿ ಆಗಿ ಬಿದ್ದಿರುವ ದೊಡ್ಡ ತಪ್ಪಲು ಪ್ರದೇಶದಲ್ಲಿ ಚತುಷ್ಪಥ ಕಾಮಗಾರಿ ನಡೆಯುವಲ್ಲಿ ಕುಸಿದಿರುವ ಮಣ್ಣು, ಕಲ್ಲು ಬಂಡೆ ಹಾಗೆಯೇ ಉಳಿದುಕೊಂಡಿದ್ದು, ಈ ಪ್ರದೇಶದಲ್ಲಿ ಸಂಚಾರಕ್ಕೆ ತಡೆ ಉಂಟಾಗಿರುವುದು ಕಂಡು ಬಂದಿದೆ.

ADVERTISEMENT

ತಾತ್ಕಾಲಿಕ ತಡೆಗೋಡೆ ನಿರ್ಮಾಣ: ಗುಂಡ್ಯದಿಂದ ಕೆಂಪುಹೊಳೆ ತನಕದ ಪ್ರದೇಶದಲ್ಲಿ ರಸ್ತೆಯ ಒಂದು ಬದಿಯಲ್ಲಿ ಹೊಳೆ ಹರಿಯುತ್ತಿದ್ದು, ಕೆಲ ದಿನಗಳ ಹಿಂದೆ ಹೊಳೆ ತುಂಬಿ ಹರಿದು ರಸ್ತೆ ಬದಿಯ ತಡೆಗೋಡೆಯನ್ನು ಬಡಿದು ಈ ಭಾಗದಲ್ಲಿ 3 ಕಡೆಯಲ್ಲಿ ತಡೆಗೋಡೆ ಕುಸಿತವಾಗಿದೆ. ಇಲ್ಲಿ ಈದೀಗ ತಾತ್ಕಾಲಿಕ ತಡೆಗೋಡೆ ಮತ್ತು ರಸ್ತೆಯ 1 ಪಥವನ್ನು ರಕ್ಷಣಾತ್ಮಕ ತಡೆಗೋಡೆಗೆ ಬಳಸಿಕೊಳ್ಳಲಾಗಿದ್ದು, ಈ ಕಾಮಗಾರಿ ನಡೆಯುತ್ತಿರುವುದು ಕಂಡು ಬಂದಿದೆ.

ರಸ್ತೆಯಿಂದ ನೇರವಾಗಿ ಕೆಳಗೆ ಸುಮಾರು 50 ಅಡಿ ಆಳದಲ್ಲಿ ಗುಂಡ್ಯ ಹೊಳೆ ಹರಿಯುತ್ತಿದ್ದು, ತುಂಬಿ ಹರಿಯುತ್ತಿದ್ದಾಗ ಹೊಳೆ ಕವಲು ಹೊಡೆದಿದ್ದು, ಹೊಳೆಯ ಭಾಗವೊಂದು ರಸ್ತೆ ಬದಿಯ ತಡೆಗೋಡೆಗೆ ತಾಗಿಕೊಂಡು ಹರಿಯುತ್ತಿದೆ. ಹೀಗಾಗಿ ಇಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ, ಹೊಳೆಯಲ್ಲಿ ನೀರು ಸಂಪೂರ್ಣ ಇಳಿಮುಖವಾಗದೆ ಶಾಸ್ವತ ತಡಗೋಡೆ ನಿರ್ಮಾಣ ಅಸಾಧ್ಯ ಎಂದು ಹೇಳಲಾಗುತ್ತಿದ್ದು, ಮುಂದೆ ಹೊಳೆಯಿಂದಲೇ ಪಿಲ್ಲರ್ ಎಬ್ಬಿಸಿ ತಡೆಗೋಡೆ ನಿರ್ಮಿಸಿದರೆ ಮಾತ್ರ ಇಲ್ಲಿ ಸುರಕ್ಷಿತ ಎಂದು ಹೇಳಲಾಗುತ್ತಿದೆ.

ಅಪಾಯ ಕಡಿಮೆ ಆಗಿದೆ-ಕಿಶೋರ್ ಶಿರಾಡಿ

‘ಘಾಟಿ ಪ್ರದೇಶದಲ್ಲಿ ಮಳೆ ಕಡಿಮೆ ಆಗಿರುವುದು ಮತ್ತು ಇದರಿಂದಾಗಿ ಗುಡ್ಡ ಕುಸಿತ ಸಂಪೂರ್ಣ ಕಡಿಮೆ ಆಗಿರುತ್ತದೆ. ಅದಾಗ್ಯೂ ಹೊಳೆ ಬದಿಯಲ್ಲಿ ರಕ್ಷಣಾತ್ಮಕ ತಡೆಗೋಡೆ ಆಗುವ ನಿಟ್ಟಿನಲ್ಲಿ ಇಲ್ಲಿ ಈ ಹಿಂದೆ ಇದ್ದ ಭಾರಿ ಅಪಾಯ ಕಡಿಮೆ ಆಗಿರುವುದು ಕಂಡು ಬರುತ್ತಿದೆ. ಜಿಲ್ಲಾಧಿಕಾರಿ ರಸ್ತೆ ಪರಿಶೀಲನೆ ನಡೆಸಿ, ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಮಲೆನಾಡು ಜನಹಿತ ರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಆಗ್ರಹಿಸಿದ್ದಾರೆ.

ಸಂಚಾರ ಸುರಕ್ಷತೆ ಮುಖ್ಯ: ರಾಘವನ್

ಘಾಟಿ ರಸ್ತೆಯನ್ನು ಪರಿಶೀಲನೆ ನಡೆಸಿದ್ದೇನೆ, ರಸ್ತೆ ತುಂಬಾ ಚೆನ್ನಾಗಿ ಇರುವುದರಿಂದಾಗಿ ಗುಡ್ಡ ಕುಸಿತ ಆಗಿರುವ ತಿರುವುಗಳಲ್ಲಿ ಅಪಾಯ ಇದೆ। ಹೀಗಾಗಿ ಇಲ್ಲಿ ಸಂಚಾರ ಸುರಕ್ಷತೆಯೂ ಮುಖ್ಯ ಆಗಿರುತ್ತದೆ. ಈ ಬಗ್ಗೆ ಮುಖ್ಯ ಎಂಜಿನಿಯರ್ ಅವರಿಗೆ ವರದಿ ಸಲ್ಲಿಸಲಿದ್ದೇನೆ, ಅವರು ಲಘು ವಾಹನ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೆದ್ದಾರಿ ಪ್ರಾಧಿಕಾರದ ಸುಪರಿಂಟೆಂಡೆಂಟ್ ಎಂಜಿನಿಯರ್ ರಾಘವನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.