ಶಿರಸಿ (ಉತ್ತರ ಕನ್ನಡ ಜಿಲ್ಲೆ): ಅಂಗನವಾಡಿಯ ಮಕ್ಕಳ ದಾಹ ತಣಿಸಲು ಶಿರಸಿಯ ಗಣೇಶನಗರದ 55 ವರ್ಷ ವಯಸ್ಸಿನ ಗೌರಿ ನಾಯ್ಕ ಅವರು ಬಾವಿ ತೋಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇಲ್ಲಿನ ಅಂಗನವಾಡಿ ಕೇಂದ್ರ 6ರ ಆವರಣದಲ್ಲಿ ನಾಲ್ಕು ಅಡಿ ವ್ಯಾಸದಲ್ಲಿ ಬಾವಿ ತೋಡುತ್ತಿದ್ದಾರೆ. ನಿತ್ಯ ಒಂದೂವರೆ ಅಡಿ ಆಳ ಅಗೆಯುತ್ತಾರೆ. ಹತ್ತಾರು ಬುಟ್ಟಿ ಮಣ್ಣು ಒಬ್ಬರೇ ಹೊರಹಾಕುತ್ತಾರೆ. ಗುದ್ದಲಿ, ಪಿಕಾಸಿ, ಹಾರೆ, ಬುಟ್ಟಿ, ಹಗ್ಗದ ನೆರವಿನಿಂದ ಅವರು ಒಂದು ತಿಂಗಳಲ್ಲಿ ಬಾವಿ ತೋಡುವ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ.
'ಗಣೇಶನಗರದಲ್ಲಿ ನೀರಿನ ಸಮಸ್ಯೆಯಿದೆ. ಅಂಗನವಾಡಿಯ ಮಕ್ಕಳು ಕುಡಿಯುವ ನೀರಿಗಾಗಿ ಪರಿತಪಿಸುವುದು ಕಂಡು ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಹಿಂದೆ ಎರಡು ಕಡೆ 65 ಅಡಿ ಆಳದ ಬಾವಿ ತೋಡಿದ್ದೇನೆ’ ಎಂದೂ ಗೌರಿ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
'ಅಂಗನವಾಡಿ ಕೇಂದ್ರದಲ್ಲಿ 15 ಮಕ್ಕಳಿದ್ದಾರೆ. ಹುತ್ಗಾರ ಗ್ರಾಮ ಪಂಚಾಯಿತಿ ಎರಡು ದಿನಕ್ಕೊಮ್ಮೆ ನೀರು ಪೂರೈಸಲಿದೆ. ಆದರೆ, ಕುಡಿಯಲು ನಿತ್ಯ ಹೊರಗಿನ ಬಾವಿಯಿಂದಲೇ ನೀರು ತರಬೇಕು’ ಎಂದು ಶಿಕ್ಷಕಿ ಜ್ಯೋತಿ ನಾಯ್ಕ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.