ADVERTISEMENT

ಅನಾರೋಗ್ಯದಿಂದ ಶಿರೂರು ಶ್ರೀಗಳ ಸಾವು: ಎಫ್‌ಎಸ್‌ಎಲ್‌ ವರದಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 12:35 IST
Last Updated 22 ಆಗಸ್ಟ್ 2018, 12:35 IST
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ    

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ವಿಷಪ್ರಾಷನದಿಂದ ಮೃತಪಟ್ಟಿಲ್ಲ; ಅನಾರೋಗ್ಯವೇ ಸಾವಿಗೆ ಕಾರಣ ಎಂಬ ಅಂಶ ಎಫ್‌ಎಸ್‌ಎಲ್‌ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಉನ್ನತ ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಶಿರೂರು ಶ್ರೀಗಳ ಯಕೃತ್‌ (ಲಿವರ್) ತೀವ್ರ ಘಾಸಿಗೊಂಡು ಬಹು ಅಂಗಾಂಗಳ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ. ದೇಹದಲ್ಲಿ ಯಾವುದೇ ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ.

ಗೊಂದಲ ಹುಟ್ಟುಹಾಕಿದ ವರದಿ:ಜುಲೈ 19ರಂದು ಶಿರೂರು ಶ್ರೀಗಳು ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಈ ಸಂದರ್ಭ ಶ್ರೀಗಳ ಸಾವಿನಲ್ಲಿ ವಿಷಪ್ರಾಷನ ಶಂಕೆಯಿದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈಗ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಎಫ್‌ಎಸ್‌ಎಲ್ ವರದಿ ಬಂದಿರುವುದು ಗೊಂದಲಗಳನ್ನು ಹುಟ್ಟಿಹಾಕಿದೆ.

ADVERTISEMENT

ಈ ಅನುಮಾನಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರಿಗೆ ಪೊಲೀಸರು ಪ್ರಶ್ನಾವಳಿಯೊಂದನ್ನು ನೀಡಿದ್ದಾರೆ ಎಂದು ‘ಪ್ರಜಾವಾಣಿ’ಗೆ ಉನ್ನತ ಮೂಲಗಳು ಖಚಿತಪಡಿಸಿವೆ.

ಶಿರೂರು ಶ್ರೀಗಳಿಗೆ ವಿಷಪ್ರಾಷನವಾಗಿದೆ ಎಂಬ ಶಂಕೆ ವ್ಯಕ್ತಪಡಿಸಲು ಬಲವಾದ ಕಾರಣಗಳು ಏನು? ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಇದ್ದಿದ್ದು ನಿಜವೇ?ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್‌ ವರದಿಯಲ್ಲಿ ವಿಷದ ಉಲ್ಲೇಖ ಇಲ್ಲದಿರುವುದು ಹೇಗೆ? ಹೀಗೆ, ಹಲವು ಪ್ರಶ್ನೆಗಳನ್ನು ವೈದ್ಯರಿಗೆ ಕೇಳಲಾಗಿದ್ದು, ವಾರಾಂತ್ಯದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ಇನ್ನೆರಡು ದಿನಗಳಲ್ಲಿ ಅಂತಿಮ ವರದಿ:ಪೊಲೀಸರು ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿಯನ್ನು ಮಣಿಪಾಲ ಆಸ್ಪತ್ರೆಯ ವೈದ್ಯರಿಗೆ ನೀಡಿದ್ದಾರೆ. ಎರಡೂ ವರದಿಗಳನ್ನು ತಾಳೆ ಹಾಕಿ, ಶಿರೂರು ಶ್ರೀಗಳ ಸಾವಿಗೆ ನಿಖರ ಕಾರಣ ಪತ್ತೆಹಚ್ಚಿ, ಅಂತಿಮ ವರದಿಯನ್ನು ವಾರಾಂತ್ಯದೊಳಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.‌ ವರದಿ ಬಂದ ನಂತರ ಶ್ರೀಗಳ ಸಾವಿನ ಹಿಂದಿರುವ ಸತ್ಯವನ್ನು ಪೊಲೀಸರು ಬಹಿರಂಗಗೊಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.