ಮಂಗಳೂರು:ಶಿರೂರುಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಸಾವಿನ ಪ್ರಕರಣದ ಕುರಿತು ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್ಎಲ್ ವರದಿಗಳನ್ನು ತಾಳೆ ಹಾಕಲಾಗುತ್ತಿದೆ. ಅಂತಿಮ ವರದಿ ಬಂದ ತಕ್ಷಣ ಅದಕ್ಕೆ ಅನುಗುಣವಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಎಡಿಜಿಪಿ ಕಮಲ್‌ಪಂತ್ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಣೋತ್ತರ ಪರೀಕ್ಷೆಯನ್ನು ಕೆಎಂಸಿ ವೈದ್ಯರು ಮಾಡಿದ್ದಾರೆ. ಫೊರೆನ್ಸಿಕ್ ತಜ್ಞರು ಎಫ್ಎಸ್ಎಲ್ ವರದಿ ನೀಡಿದ್ದಾರೆ. ಎರಡೂ ವರದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ವರದಿ ನೀಡುವಂತೆ ಫೊರೆನ್ಸಿಕ್ ತಜ್ಞರಿಗೆ ಕೇಳಲಾಗಿದೆ. ಅಲ್ಲದೇ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಕೆಎಂಸಿ ವೈದ್ಯರಿಂದ ಕೆಲ ಮಾಹಿತಿ ಕೇಳಿದ್ದಾರೆ. ಅದೆಲ್ಲವನ್ನು ಕ್ರೋಡೀಕರಿಸಲಾಗುವುದು ಎಂದು ವಿವರಿಸಿದರು.
ಜಿಲ್ಲಾಡಳಿತ, ಪೊಲೀಸರ ರಕ್ಷಣಾ ಕಾರ್ಯ ಶ್ಲಾಘನೀಯ
ಜೋಡುಪಾಲದ ರಕ್ಷಣಾ ಕಾರ್ಯಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೋರಿದ ಮುತುವರ್ಜಿ ಮಾದರಿಯಾಗಿದೆ. ಜಿಲ್ಲೆ ಬೇರೆಯಾಗಿದ್ದರೂ ಇಲ್ಲಿನ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಪೊಲೀಸ್ ಸಿಬ್ಬಂದಿ ಮಾಡಿರುವ ಕೆಲಸ ಮಹತ್ವದ್ದಾಗಿದೆ. ಕೊಡಗಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದ ಸಂದರ್ಭದಲ್ಲಿ ಜೋಡುಪಾಲದ ಜನರ ರಕ್ಷಣೆಗೆ ಧಾವಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸರು ಮಾನವೀಯ ಕಾರ್ಯ ಮಾಡಿದ್ದಾರೆ. ಅವರ ಸೇವೆಯನ್ನು ಇಲಾಖೆ ಪರಿಗಣಿಸಿದ್ದು, ಸೂಕ್ತ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.