ಶಿರೂರು: 'ಗುಡ್ಡ ಕುಸಿದು ನಡೆದ ದುರ್ಘಟನೆ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಕಣ್ಮರೆಯಾದವರ ಪತ್ತೆಗೆ ಕೇಂದ್ರ ಸರ್ಕಾರದಿಂದಲೂ ನೆರವು ಸಿಕ್ಕಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ದುರ್ಘಟನೆ ನಡೆದ ಸ್ಥಳ ವೀಕ್ಷಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಶಿರೂರು ದುರಂತದ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ' ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪ ಅಲ್ಲಗಳೆದರು.
'ದುರಂತದ ವಿಚಾರದಲ್ಲಿ ಯಾರು ರಾಜಕಾರಣ ಮಾಡುತ್ತಾರೊ, ಬಿಡುತ್ತಾರೊ ಗೊತ್ತಿಲ್ಲ. ನಾವಂತೂ ರಾಜಕೀಯ ಮಾಡುವುದಿಲ್ಲ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಈಗಾಗಲೆ ನೀಡಲಾಗಿದೆ. ಕಣ್ಮರೆಯಾದವರು ಒಂದು ವೇಳೆ ಮೃತಪಟ್ಟಿದ್ದರೆ ಅವರ ಕುಟುಂಬಕ್ಕೂ ಪರಿಹಾರ ನೀಡಲಾಗುವುದು' ಎಂದರು.
'ಗುಡ್ಡ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿಗೆ ಅವೈಜ್ಞಾನಿಕವಾಗಿ ಗುಡ್ಡ ಕಡಿದಿದ್ದು ಕಾರಣ ಎಂಬುದಾಗಿ ಜನರು ದೂರುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗುವುದು. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಡ ಹೇರಲಾಗುವುದು' ಎಂದರು.
'ಘಟನೆಯಲ್ಲಿ ಕಣ್ಮರೆಯಾದವರ ಪತ್ತೆಗೆ ನೌಕಾದಳ, ಸೇನಾ ತುಕಡಿ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ನೆರವು ಪಡೆಯಲಾಗಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.