ADVERTISEMENT

ಮರಣಪೂರ್ವದಲ್ಲೇ ಉತ್ತರಾಧಿಕಾರಿ ನೇಮಕ?

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 19:30 IST
Last Updated 19 ಜುಲೈ 2018, 19:30 IST
ಶ್ರೀಕೃಷ್ಣನ ಆರಾಧನೆಯಲ್ಲಿ ತೊಡಗಿರುವ ಶಿರೂರು ಶ್ರೀಗಳು
ಶ್ರೀಕೃಷ್ಣನ ಆರಾಧನೆಯಲ್ಲಿ ತೊಡಗಿರುವ ಶಿರೂರು ಶ್ರೀಗಳು   

ಉಡುಪಿ: ‘ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಮರಣಪೂರ್ವದಲ್ಲೇ ಮಠದ ಉತ್ತರಾಧಿಕಾರಿಯ ಆಯ್ಕೆ ಮಾಡಿ, ಆಪ್ತರ ಬಳಿ ಮಾಹಿತಿ ನೀಡಿದ್ದರು’ ಎಂದು ಮಠದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಶಿಷ್ಯ ಸ್ವೀಕಾರ ಮಾಡದ ಹೊರತು ಪಟ್ಟದ ದೇವರನ್ನು ಹಸ್ತಾಂತರ ಮಾಡುವುದಿಲ್ಲ’ ಎಂದು ಯತಿಗಳು ಪಟ್ಟು ಹಿಡಿದ ಬೆನ್ನಲ್ಲೇ, ಶಿರೂರು ಶ್ರೀಗಳು ಇದೇ 14ರಂದು ಮಠಕ್ಕೆ ಉತ್ತರಾಧಿಕಾರಿ ಘೋಷಣೆ ಮಾಡುವ ಬಗ್ಗೆ ಚಿಂತನೆ ನಡೆಸಿ, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು. ಅನಿವಾರ್ಯ ಕಾರಣದಿಂದ ಶ್ರೀಗಳು ಘೋಷಣೆಯನ್ನು ಮುಂದೂಡಿದ್ದರು ಎಂದು ಮೂಲಗಳು ತಿಳಿಸಿವೆ.

ಮಠದ ಮೂಲಗಳ ಪ್ರಕಾರ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವವರಾಗಿದ್ದು, ವಯಸ್ಸಿನಲ್ಲಿ ಚಿಕ್ಕವರು ಎನ್ನಲಾಗಿದೆ. ಜತೆಗೆ, ಅಷ್ಟಮಠದ ಯತಿಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಷ್ಟಮಠಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ADVERTISEMENT

‘ಶಿರೂರು ಶ್ರೀಗಳು ಉತ್ತರಾಧಿಕಾರಿಯನ್ನು ಅಧಿಕೃತವಾಗಿ ಘೋಷಣೆ ಮಾಡದಿರುವುದರಿಂದ, ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡುವ ಸಂಪೂರ್ಣ ಜವಾಬ್ದಾರಿ ದ್ವಂದ್ವ ಮಠವಾದ ಸೋದೆ ಮಠದ ಮೇಲಿದೆ. ಮಠಾಧೀಶರಾಗಿ ನೇಮಕವಾಗಬೇಕಾದರೆ, ಸಂಬಂಧಿತ ವ್ಯಕ್ತಿಯ ಜಾತಕದಲ್ಲಿ ಸನ್ಯಾಸ ಯೋಗ ಇರಬೇಕು. ಮುಂದಿನ ಉತ್ತರಾಯಣ ಬರುವವರೆಗೂ ಮಠದ ಮುಂದಿನ ಮಠಾಧೀಶರನ್ನು ನೇಮಕ ಮಾಡುವುದು ಕಷ್ಟ. ಜನವರಿ 15ರ ನಂತರದಲ್ಲಿ ನೇಮಕ ನಡೆಯಲಿದೆ’ಎಂದು ಮೂಲಗಳು ಹೇಳಿವೆ.

‘ಶೀಘ್ರ ಉತ್ತರಾಧಿಕಾರಿ ನೇಮಕ’

ಉಡುಪಿ: ಲಕ್ಷ್ಮೀವರ ತೀರ್ಥರ ಅಕಾಲಿಕ ಮರಣದಿಂದ ತೆರವಾಗಿರುವ ಶಿರೂರು ಮಠಕ್ಕೆ ಶೀಘ್ರ ಉತ್ತರಾಧಿಕಾರಿಯನ್ನು ಅಷ್ಟಮಠಗಳ ಯತಿಗಳ ಸಮಕ್ಷಮದಲ್ಲಿ ನೇಮಕ ಮಾಡಲಾಗುವುದು ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.