ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಆಯೋಜಿಸಿದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ, ಮಹಾರಾಷ್ಟ್ರದ ಶಿವಸೇನೆ ಕಾರ್ಯಕರ್ತರನ್ನು ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಬಳಿ ಕರ್ನಾಟಕ– ಮಹಾರಾಷ್ಟ್ರ ಗಡಿಯಲ್ಲಿಯೇ ಪೊಲೀಸರು ತಡೆದರು.
ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಶಂಭುರಾಜೆ ದೇಸಾಯಿ, ಚಂದ್ರಕಾಂತ ಪಾಟೀಲ, ಸಚಿವ ದೀಪಕ ಕೇಸರಕರ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ್‍ಯಾರೂ ಇತ್ತ ಸುಳಿಯಲಿಲ್ಲ.
ಆದರೆ, ಮಹಾರಾಷ್ಟ್ರದ ಶಿವಸೇನೆಯ ಹಲವು ಕಾರ್ಯಕರ್ತರು ಗಡಿಯೊಳಗೆ ನುಗ್ಗುವುದು ‘ಸಂಪ್ರದಾಯ’ ಎಂಬಂತೆ ಈ ವರ್ಷವೂ ಹೈಡ್ರಾಮಾ ಮಾಡಿದರು. ಆದರೆ, 90 ಕಿ.ಮೀ ಆಚೆಯೇ ಪೊಲೀಸರು ಅವರನ್ನು ತಡೆದರು.
‘ಶಿವಸೇನೆಯ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೇವನೆ ಹಾಗೂ 30 ಕಾರ್ಯಕರ್ತರು ಜಿಲ್ಲೆ ಪ್ರವೇಶಿಸದಂತೆ ತಡೆದಿದ್ದೇವೆ. ಕೊಲ್ಹಾಪುರ ಪೊಲೀಸರಿಗೆ ಅವರನ್ನು ಒಪ್ಪಿಸಿದ್ದೇವೆ. ಜಿಲ್ಲೆಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.