ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 116ನೇ ವರ್ಷದ ಗುರುವಂದನಾ ಮಹೋತ್ಸವ ಏ. 1ರಂದು ಮಠದ ಆವರಣದಲ್ಲಿ ವೈಭವದಿಂದ ನಡೆಯಲಿದೆ.
ಸ್ವಾಮೀಜಿ ಸ್ಮರಣೆಯಲ್ಲಿ ‘ಶಿವ ಕುಮಾರ ಸ್ವಾಮೀಜಿ ಗಾನೋತ್ಸವ’ ಎಂಬ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ಗಾಯಕ ಹಂಸಲೇಖ ನೇತೃತ್ವದಲ್ಲಿ ನಾಡಿನ ಹಲವು ಖ್ಯಾತ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗವಿದೆ.
ಏ. 1ರಂದು ಸಂಜೆ 5 ಗಂಟೆಗೆ ಮಠದ ಆವರಣದಲ್ಲಿ ಹಿನ್ನೆಲೆ ಗಾಯಕರಾದ ಕೆ.ಎಸ್. ಚಿತ್ರಾ, ಎಸ್.ಪಿ. ಚರಣ್, ಮಧು ಬಾಲಕೃಷ್ಣನ್, ಹೇಮಂತ್ ಕುಮಾರ್, ಅನುರಾಧ ಭಟ್, ಲತಾ ಹಂಸಲೇಖ ಅವರು ಶಿವಕುಮಾರ ಸ್ವಾಮೀಜಿ ನೆನಪಿನಲ್ಲಿ ಗಾನಸುಧೆ ಹರಿಸಲಿದ್ದಾರೆ. ನಾಡಿನ ವಿವಿಧೆಡೆಗಳ ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಗಾನಸುಧೆಯನ್ನು ಮನ ತುಂಬಿಕೊಳ್ಳಲಿದ್ದಾರೆ.
ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಶಿವಕುಮಾರ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗಿತ್ತು. ಮಠದಲ್ಲಿ ಪೂಜೆ, ಸ್ವಾಮೀಜಿ ಸಾಧನೆ ಸ್ಮರಣೆಗೆ ಸೀಮಿತಗೊಂಡಿತ್ತು. ಆದರೆ, ಈ ಬಾರಿ ದೊಡ್ಡ ಮಟ್ಟದಲ್ಲಿ ಗುರುವಂದನಾ ಆಚರಣೆಗೆ ಸಿದ್ಧತೆ ನಡೆದಿದ್ದು, ಈ ನಡುವೆಯೇ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ.
ಸಾಮಾನ್ಯವಾಗಿ ಸ್ವಾಮೀಜಿ ಸ್ಮರಿಸಿಕೊಳ್ಳಲು ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಬರುತ್ತಿದ್ದರು. ಚುನಾವಣೆ ನೀತಿ ಸಂಹಿತೆಯಿಂದಾಗಿ ರಾಜಕಾರಣಿಗಳು ಬಂದರೂ ವೇದಿಕೆ ಏರದೆ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು
ತೆರಳಲಿದ್ದಾರೆ.
ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತಿಪಟೂರು ಕೆರಗೋಡಿ ರಂಗಾಪುರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ
ನಡೆಯಲಿವೆ.
ಶಿವಕುಮಾರ ಸ್ವಾಮೀಜಿ ಗದ್ದುಗೆಯಲ್ಲಿ ಪೂಜೆ ನೆರವೇರಿದ ನಂತರ ಧಾರ್ಮಿಕ ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿವೆ. ವೇದಿಕೆಯಲ್ಲಿ
ಸ್ವಾಮೀಜಿಗಳಷ್ಟೇ ಭಾಗವಹಿಸಲಿದ್ದಾರೆ. ರಾಜಕಾರಣಿಗಳಿಗೆ ಆಹ್ವಾನ ನೀಡಿಲ್ಲ. ಬಂದರೂ ವೇದಿಕೆಯಲ್ಲಿ ಅವಕಾಶ ಇರುವುದಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.