ಬೆಂಗಳೂರು: ಇ.ಡಿ ಅಧಿಕಾರಿಗಳ ವಿರುದ್ಧ ವಾಲ್ಮೀಕಿ ನಿಗಮದ ಪದನಿಮಿತ್ತ ನಿರ್ದೇಶಕರಾಗಿದ್ದ ಬಿ. ಕಲ್ಲೇಶ್ ಅವರು ಪೊಲೀಸರಿಗೆ ನೀಡಿರುವ ದೂರನ್ನು ಪ್ರಸ್ತಾಪಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಕೆ.ಎಂ ಶಿವಲಿಂಗೇಗೌಡ ನಿಲುವಳಿ ಮಂಡಿಸಲು ಮುಂದಾದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಹೊತ್ತು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ, ‘ನಿಗಮದ ಹಗರಣದಲ್ಲಿ ಮುಖ್ಯಮಂತ್ರಿಯ ಹೆಸರು ಹೇಳುವಂತೆ ಒತ್ತಾಯಿಸಿ ಇ.ಡಿ ಅಧಿಕಾರಿಗಳು ಕಲ್ಲೇಶ್ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ. ಆ ಅಧಿಕಾರಿಗಳು ಸರ್ಕಾರವನ್ನು ಧ್ವಂಸಗೊಳಿಸಲು ಯತ್ನಿಸುತ್ತಿದ್ದಾರೆ. ಇ.ಡಿ ವಿರುದ್ಧವೂ ತನಿಖೆ ಆಗಬೇಕು. ಇ.ಡಿ ಏನು ಇವರಪ್ಪನ ಮನೆಯದ್ದೇ’ ಎಂದು ಜೋರು ಧ್ವನಿಯಲ್ಲಿ ಪ್ರಶ್ನಿಸಿದರು.
ಆಗ ಕೆರಳಿದ ಬಿಜೆಪಿ ಸದಸ್ಯರು, ‘ಅಕ್ರಮದ ತನಿಖೆ ಇ.ಡಿ ಮಾಡಬಾರದೆಂದರೆ ಹೇಗೆ? ಈಗಾಗಲೇ ಈ ಪ್ರಕರಣ ಕೋರ್ಟ್‌ನಲ್ಲಿ ಇರುವುದರಿಂದ ನಿಲುವಳಿ ಮಂಡಿಸಲು ಅವಕಾಶ ನೀಡಬಾರದು’ ಎಂದು ಸಭಾಧ್ಯಕ್ಷರನ್ನು ಆಗ್ರಹಿಸಿದರು.
ಮಾತು ಮುಂದುವರಿಸಿದ ಶಿವಲಿಂಗೇಗೌಡ, ‘ಇ.ಡಿಯವರು ಅಂದಾಕ್ಷಣ ಏನು ಬೇಕಾದರೂ ಮಾಡಬಹುದೇ’ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ ಕೆಲವು ಸದಸ್ಯರು ಅವರಿಗೆ ದನಿಗೂಡಿಸಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವಿನ ಮಾತಿನ ಚಕಮಕಿ ನಡೆಯಿತು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.