ADVERTISEMENT

ಶಿವಳ್ಳಿ ಬ್ರಾಹ್ಮಣ ಹುಡುಗರು ಕುಡಿದು ಮೋರಿಯಲ್ಲಿ ಬೀಳುತ್ತಿದ್ದಾರೆ–ಮಾಧವಾಶ್ರಮಶ್ರೀ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 14:01 IST
Last Updated 11 ಜನವರಿ 2020, 14:01 IST
ಕೊಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಶನಿವಾರ ಆಯೋಜಿಸಿದ್ದ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶದಲ್ಲಿ ಶಾಸಕ ದಿನೇಶ್‌ ಗುಂಡೂರಾವ್‌ ಅವರು ಹೆಬ್ಬೂರು ಕೋದಂಡಾಶ್ರಮ ಮಠದ ಮಾಧವಾಶ್ರಮ ಸ್ವಾಮೀಜಿ ಅವರಿಗೆ ವಂದಿಸಿದರು –ಪ್ರಜಾವಾಣಿ ಚಿತ್ರ
ಕೊಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಶನಿವಾರ ಆಯೋಜಿಸಿದ್ದ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶದಲ್ಲಿ ಶಾಸಕ ದಿನೇಶ್‌ ಗುಂಡೂರಾವ್‌ ಅವರು ಹೆಬ್ಬೂರು ಕೋದಂಡಾಶ್ರಮ ಮಠದ ಮಾಧವಾಶ್ರಮ ಸ್ವಾಮೀಜಿ ಅವರಿಗೆ ವಂದಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿವಳ್ಳಿ ಬ್ರಾಹ್ಮಣ ಹುಡುಗರು ಸಾಯಂಕಾಲವಾಗುತ್ತಿದ್ದಂತೆ ಕುಡಿದು ಮೋರಿಯಲ್ಲಿ ಬೀಳುತ್ತಿರುವ ಬಗ್ಗೆ ಆಸಮಾಜದವರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಸಮಾಜದವರು ಆ ಹಂತಕ್ಕೆ ತಲುಪದಿರುವುದಕ್ಕೆ ಸಮಾಧಾನಪಟ್ಟುಕೊಳ್ಳಬೇಕು’ ಎಂದು ಹೆಬ್ಬೂರಿನ ಕೋದಂಡಾಶ್ರಮ ಮಠದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಮಂಗಳೂರಿನ ಸ್ಥಾನಿಕ ಬ್ರಾಹ್ಮಣ ಮಹಾಮಂಡಲವು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು. ‘ಆರ್ಥಿಕವಾಗಿ ಸಬಲರಾಗುತ್ತಿದ್ದಂತೆ ಅನುಷ್ಠಾನಗಳನ್ನು ಬಿಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಮಾಜದ 100 ಜನರಲ್ಲಿ 10 ಮಂದಿ ಮಾತ್ರ ಶುದ್ಧ ಬ್ರಾಹ್ಮಣರಾಗಿ ಉಳಿದಿದ್ದಾರೆ. ಒಂದು ಹೊತ್ತು ಸಂಧ್ಯಾವಂದನೆ ಮಾಡಲು ಸಾಧ್ಯವಾಗದಷ್ಟು ಒತ್ತಡದಲ್ಲಿ ಇರುವಂತೆ ವರ್ತಿಸುವವರೇ ಅಧಿಕ ಮಂದಿ. ಇನ್ನು ಕೆಲವರು ಜನಿವಾರವನ್ನೂ ಧರಿಸದಿರುವುದು ಬೇಸರದ ಸಂಗತಿ. ಇಂತಹ ಬೆಳವಣಿಗೆಗಳು ಸಮಾಜಕ್ಕೆ ಶ್ರೇಯಸ್ಸು ತರುವುದಿಲ್ಲ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದೊದಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆಚರಣೆ, ಅನುಷ್ಠಾನಗಳನ್ನು ಬಿಟ್ಟರೂ ಅವರು ಬ್ರಾಹ್ಮಣತ್ವವನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಸ್ಥಾನಿಕ ಬ್ರಾಹ್ಮಣರು ಒಂದು ಕಾಲದಲ್ಲಿ ಶ್ರೀಮಂತರಾಗಿದ್ದರು. ಸ್ಥಾನಿಕ ಎನ್ನುವುದು ಗೌರವ ಸೂಚಕ ಪದವಾಗಿದೆ. ಕಾಲಾಂತರದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡು, ಅಡ್ಡಪಂಕ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳುವ ಸ್ಥಿತಿ ಬಂದೊದಗಿತು. ಈ ಅನುಭವವು ಪೂರ್ವಾಶ್ರಮದಲ್ಲಿ ನನ್ನ ಅನುಭವಕ್ಕೂ ಬಂದಿತ್ತು’ ಎಂದು ತಿಳಿಸಿದರು.

ADVERTISEMENT

ಪರಿವರ್ತನೆ ಸಹಜ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಎಲ್ಲ ಸಮಾಜದಲ್ಲೂ ಪರಿವರ್ತನೆ ಆಗುತ್ತಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜೀವನ ನಡೆಸಬೇಕಾದರೆ ವ್ಯವಸ್ಥೆಯ ಅಡಿಯಲ್ಲಿಯೇ ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕು. ನಮ್ಮಲ್ಲಿನ ಬುದ್ಧಿಶಕ್ತಿ ಹಾಗೂ ಸಾಧಿಸಬೇಕೆಂಬ ಛಲವೇ ನಮ್ಮ ಸಮುದಾಯವನ್ನು ಕಾಪಾಡಲಿದೆ’ ಎಂದರು.

‘ಬಲಿಷ್ಠವಾಗಿದ್ದಡೈನೋಸಾರ್‌ಗಳಗೆ ಹೊಸತನ್ನುಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವುಗಳು ನಿರ್ನಾಮವಾದವು. ಆದ್ದರಿಂದ ನಾವು ಹೊಸತನ್ನು ಬರಮಾಡಿಕೊಳ್ಳಬೇಕು. ಮೈತ್ರಿ ಸರ್ಕಾರದ ಅವಧಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ, ₹ 25 ಕೋಟಿ ಅನುದಾನ ನೀಡಲಾಗಿತ್ತು. ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಇಷ್ಟು ಹಣ ಸಾಕಾಗುವುದಿಲ್ಲ. ಈ ಸರ್ಕಾರ ₹ 100 ಕೋಟಿಯನ್ನಾದರೂ ಮೀಸಲಿಡಲಿ’ ಎಂದು ಒತ್ತಾಯಿಸಿದರು.

ಡಾ.ವೈ.ಸುದರ್ಶನ ರಾವ್ ಅವರು ರಚಿಸಿದ ‘ಅಸ್ಮಿತೆ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದಕ್ಕೂ ಮೊದಲು ವೈದಿಕ ಶಿಬಿರ, ಗಣಹೋಮ, ಮಹಾಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಸಂಜೆ ‘ಮಹಿಷಮರ್ದಿನಿ’ ಯಕ್ಷಗಾನ ಪ್ರಸಂಗ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.