ADVERTISEMENT

ಹುಣಸೋಡು ಸ್ಫೋಟ ಪ್ರಕರಣ: ಅತ್ತ ಕ್ರಷರ್‌ಗಳಿಗೆ ಗುತ್ತಿಗೆ, ಇತ್ತ ಸರ್ಕಾರದ ನೆರವು!

ನಾಲ್ಕು ವಾಹನ, ಒಂದು ಬೈಕ್‌ ಅವಶೇಷ ಪತ್ತೆ, ಸಾವಿನ ಸಂಖ್ಯೆ ಹೆಚ್ಚಳದ ಶಂಕೆ

ಚಂದ್ರಹಾಸ ಹಿರೇಮಳಲಿ
Published 24 ಫೆಬ್ರುವರಿ 2021, 20:28 IST
Last Updated 24 ಫೆಬ್ರುವರಿ 2021, 20:28 IST
ಹುಣಸೋಡು ಸ್ಫೋಟ ನಡೆದ ಸ್ಥಳ
ಹುಣಸೋಡು ಸ್ಫೋಟ ನಡೆದ ಸ್ಥಳ    

ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣದ ನಂತರ ಜಿಲ್ಲಾಡಳಿತ ಕಲ್ಲು ಗಣಿಗಾರಿಕೆಯ ಸಮಗ್ರ ಮಾಹಿತಿ ಕಲೆ
ಹಾಕಿದ್ದು, ಕ್ವಾರಿ, ಕ್ರಷರ್‌ಗಳಿಗೆ ಜಮೀನು ಗುತ್ತಿಗೆ ನೀಡಿದ ಹಲವು ರೈತರು ‘ಕಿಸಾನ್ ಸಮ್ಮಾನ್’ ಯೋಜನೆಯಡಿ ಕೇಂದ್ರ, ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಪಡೆದಿರುವುದು ಬೆಳಕಿಗೆ ಬಂದಿದೆ.

ರೈತರು ತಮ್ಮ ಭೂಮಿಯಲ್ಲಿ ಕ್ರಷರ್ ನಡೆಸಲು, ಕಲ್ಲು ತೆಗೆಯಲು ಅತ್ಯಧಿಕ ಬಾಡಿಗೆ ಪಡೆದು ಲೀಸ್ ನೀಡಿದ್ದರೂ ಸರ್ಕಾರ ರೈತರಿಗೆ ನೀಡುವ ಸೌಲಭ್ಯಗಳನ್ನೂ ಪಡೆದಿದ್ದಾರೆ. ಕೇಂದ್ರ ಸರ್ಕಾರ ನೀಡುವ ₹ 6 ಸಾವಿರ, ರಾಜ್ಯ ಸರ್ಕಾರ ನೀಡುವ ₹ 4 ಸಾವಿರ ಅವರ ಖಾತೆಗಳಿಗೆ ಜಮೆಯಾಗಿದೆ. ಆಯಾ ಭಾಗದ ಗ್ರಾಮ ಲೆಕ್ಕಿಗರು, ಕಂದಾಯ ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ತಂಡ ಇಂತಹ ರೈತರ ಪಟ್ಟಿ ತಯಾರಿಸಿದೆ.

ನಾಲ್ಕು ವಾಹನ, ಒಂದು ಬೈಕ್‌ ಅವಶೇಷ ಪತ್ತೆ: ಸ್ಫೋಟ ನಡೆದ ಸ್ಥಳದಲ್ಲಿ ಒಂದು ಲಾರಿ, ಒಂದು ಪಿಕಪ್‌ ವಾಹನ ಸುಟ್ಟು ಕರಕಲಾಗಿವೆ ಎಂದು ಆರಂಭದ ತನಿಖೆಯಲ್ಲಿ ಪೊಲೀಸರು ಮಾಹಿತಿ ನೀಡಿದ್ದರು. ಆದರೆ, ಸಾರಿಗೆ ಅಧಿಕಾರಿಗಳು ಸ್ಥಳದಲ್ಲಿ ದೊರೆತ ವಾಹನಗಳ ಅವಶೇಷಗಳನ್ನು ಕಲೆ ಹಾಕಿ, ಪರಿಶೀಲಿಸಿದ ನಂತರ ಒಂದು ಲಾರಿ, ಮೂರು ಪಿಕಪ್‌ ವಾಹನಗಳು ಹಾಗೂ ಒಂದು ಬೈಕ್‌ ಇದ್ದವು ಎನ್ನುವ ಅಂಶ ದೃಢಪಟ್ಟಿದೆ. ವಾಹನಗಳ ಚಾಸಿಗಳೂ ಲಭ್ಯವಾಗಿವೆ.

ADVERTISEMENT

ಸಾವಿನ ಸಂಖ್ಯೆ ಹೆಚ್ಚಾಗಿರುವ ಶಂಕೆ: ಸ್ಫೋಟದಲ್ಲಿ ಬೈಕ್‌ ಸೇರಿ ಐದು ವಾಹನಗಳು ಇದ್ದ ಮಾಹಿತಿ ಖಚಿತವಾದ ನಂತರ ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗಿರುವ ಸಾಧ್ಯತೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಒಂದು ವಾಹನಕ್ಕೆ ಇಬ್ಬರಂತೆ ಎಂಟು, ಒಬ್ಬ ಬೈಕ್‌ ಸವಾರ, ಸ್ಥಳದಲ್ಲಿದ್ದ ಇತರರು ಸೇರಿದರೆ ಸಾವಿನ ಸಂಖ್ಯೆ ಹೆಚ್ಚಾಗಿರುವ ಸಾಧ್ಯತೆ ಇದೆ. ಅಂದು ಸ್ಫೋಟ ನಡೆದ ಸ್ಥಳದಲ್ಲಿದ್ದು, ನಾಪತ್ತೆಯಾಗಿರುವ ಕೆಲವರು ಮೃತಪಟ್ಟಿರಬಹುದು ಎನ್ನಲಾಗಿದೆ.

ಸ್ಥಳೀಯರ ಕೈಗೆ ನೋಟಿನ ಕಂತೆಗಳು: ಜ. 21ರ ರಾತ್ರಿ 10.20ಕ್ಕೆ ಸ್ಫೋಟ ನಡೆದು, ಪೊಲೀಸರು ಬರುವ ಮೊದಲೇ ಸ್ಥಳೀಯರು ಸ್ಥಳಕ್ಕೆ ಲಗ್ಗೆ ಹಾಕಿದ್ದರು. ಸ್ಫೋಟ ನಡೆದ ಸ್ಥಳದ ಸಮೀಪ ಹಲವರಿಗೆ ನೋಟಿನ ಕಂತೆಗಳು ದೊರೆ
ತಿವೆ ಎಂಬ ಸುದ್ದಿ ಹಬ್ಬಿತ್ತು. ಮರುದಿನ ಪೊಲೀಸರಿಗೆ ಸ್ಥಳದಲ್ಲಿ ದೊರೆತ ಅರೆ ಸುಟ್ಟ ನೋಟುಗಳು ಅದಕ್ಕೆ ಸಾಕ್ಷಿಯಾಗಿ ದ್ದವು. ಜಿಲೆಟಿನ್‌ ಕಡ್ಡಿಗಳು, ಡಿಟೊನೇಟರ್ ಮತ್ತಿತರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದವರು ದೊಡ್ಡ ಪ್ರಮಾಣದ ಹಣ ತಂದಿದ್ದರು ಎನ್ನಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಮೂವರ ಜಾಮೀನು ಅರ್ಜಿ ತಿರಸ್ಕೃತ

ಈ ಪ್ರಕರಣದ ಮೂವರು ಆರೋಪಿಗಳ ಜಾಮೀನು ಅರ್ಜಿಗಳನ್ನು ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಆಂಧ್ರಪ್ರದೇಶದ ನಾಲ್ವರು ಸೇರಿ 10 ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ. ಅವರಲ್ಲಿ 7 ಜನರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಜಮೀನಿನ ಮಾಲೀಕರಾದ ಶಂಕರಗೌಡ ಟಿ. ಕುಲಕರ್ಣಿ, ಅವಿನಾಶ್‌ ಕುಲಕರ್ಣಿ, ಎಸ್‌.ಎಸ್. ಕ್ರಷರ್ ಮಾಲೀಕ ಸುಧಾಕರ್ ಅವರ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಜಿಲ್ಲೆಗೆ ಸ್ಫೋಟಕಗಳನ್ನು ಪೂರೈಸಿದ ಆರೋಪ ಹೊತ್ತಿರುವ ಆಂಧ್ರ ಪ್ರದೇಶದ ಶ್ರೀರಾಮುಲು,ಮಂಜುನಾಥ್ ಸಾಯಿ, ಪೃಥ್ವಿರಾಜ್ ಸಾಯಿ, ವಿಜಯಕುಮಾರ್ ಅವರ ಅರ್ಜಿ ವಿಚಾರಣೆ ನಡೆಯುತ್ತಿದೆ.

ಡಿಟೋನೇಟರ್ ಪತ್ತೆ: ಪ್ರಕರಣ ದಾಖಲು

ದಾವಣಗೆರೆ: ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದ ಸ್ಥಳ ಪರಿಶೀಲನೆ ವೇಳೆ ಬುಧವಾರ ಪೊಲೀಸರಿಗೆ ಒಂದು ಜೀವಂತ ಎಲೆಕ್ಟ್ರಿಕಲ್ ಡಿಟೋನೇಟರ್ ಪತ್ತೆಯಾಗಿದೆ. ಈ ಸಂಬಂಧ ಕ್ವಾರಿ ಮಾಲೀಕ ಕುಮಾರನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.