ಬೆಂಗಳೂರು: ‘ಸಂಸದ ಅನಂತ ಕುಮಾರ್ ಹೆಗಡೆ ಬಿಜೆಪಿಯೊಳಗಿರುವ ಹುಚ್ಚ. ಆತನಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಚಿಕಿತ್ಸೆ ಕೊಡಿಸಲಿ. ಇಲ್ಲದಿದ್ದರೆ ನಾವು ಕೊಡಿಸುತ್ತೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಅನಂತ ಕುಮಾರ್ ಹೆಗಡೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ತಂಗಡಗಿ, ‘ಹೆಗಡೆ ಮಾತಿಗೆ ನಾವು ಬೆಲೆ ಕೊಡುವುದಿಲ್ಲ. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೇ ಹೇಳಿದ್ದಾರೆ. ಆ ಮೂಲಕ, ಆತ ಹುಚ್ಚ ಎಂದು ಬಿಜೆಪಿಯವರು ಒಪ್ಪಿಕೊಂಡಂತಾಗಿದೆ. ಹೆಗಡೆ ಮೇಲೆ ಕ್ರಮ ತೆಗೆದುಕೊಳ್ಳುವ ಕುರಿತು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನಿರ್ಧರಿಸುತ್ತಾರೆ’ ಎಂದರು.
31ರೊಳಗೆ ಜಾತಿ ಜನಗಣತಿ ವರದಿ ಸ್ವೀಕಾರ: ‘ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು (ಜಾತಿ ಜನಗಣತಿ) ಇದೇ 31ರ ಒಳಗೆ ತೆಗೆದುಕೊಳ್ಳುತ್ತೇವೆ’ ಎಂದು ತಂಗಡಗಿ ತಿಳಿಸಿದರು.
‘ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಾಲಿ ಆಯೋಗದ ಅವಧಿ ಇದೇ 31ರವರೆಗೂ ಇದೆ. ಅವಧಿ ಮತ್ತೆ ವಿಸ್ತರಿಸುವ ಯೋಚನೆ ಇಲ್ಲ. ಅಷ್ಟರೊಳಗೆ ವರದಿ ಕೊಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅವರು ಕೊಟ್ಟರೆ ನಾವು ತೆಗೆದುಕೊಳ್ಳುತ್ತೇವೆ. ವರದಿ ನೋಡಿದ ಬಳಿಕ ಆ ಬಗ್ಗೆ ಚರ್ಚೆ ಮಾಡೋಣ. ಇದು ಜಾತಿ ಜನಗಣತಿ ಅಲ್ಲ. ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ವರದಿ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.