ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಬಗ್ಗೆ ಮಾತನಾಡಿದ್ದ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಜಮೀರ್ ಅಹಮದ್ ಹಾಗೂ ಅವರ ಖಾಂದಾನ್ ನಾಚಿಕೆ ಇಲ್ಲದೆ, ದೇವೇಗೌಡ ಅವರ ಕುಟುಂಬವನ್ನು ಖರೀದಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ವಕ್ಫ್ ಬೋರ್ಡ್ ಮೂಲಕ ರೈತರು ಮತ್ತು ಮಠಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದ ಅವರು ಈಗ ಮಾಜಿ ಪ್ರಧಾನಿ ಮತ್ತು ಅವರ ಕುಟುಂಬವನ್ನು ಅವಮಾನಿಸಿದ್ದಾರೆ. ಈ ದುರಹಂಕಾರ ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಶನಿವಾರ ಪ್ರಚಾರಸಭೆಯಲ್ಲಿ ಜಮೀರ್ ಅಹಮದ್ ಖಾನ್ ಉರ್ದುವಿನಲ್ಲಿ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ‘ಕಾಲಿಯಾ’ (ಕರಿಯ) ಎಂದು ಕರೆದಿದ್ದರು. ಜಮೀರ್ ಬಳಸಿದ ಈ ಪದ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಕುಮಾರಸ್ವಾಮಿ ವಿರುದ್ಧ ತಾವು ಬಳಸಿದ ‘ಕಾಲಿಯಾ’ ಪದ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಸೋಮವಾರ ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಜಮೀರ್, ‘ಕುಮಾರಸ್ವಾಮಿ ಅವರನ್ನು ನಾನು ಯಾವಾಗಲೂ ಪ್ರೀತಿಯಿಂದ ‘ಕರಿಯಣ್ಣ’ ಎಂದೇ ಕರೆಯುವೆ. ಕುಳ್ಳಗಿರುವ ನನ್ನನ್ನು ಅವರು ಯಾವಾಗಲೂ ‘ಕುಳ್ಳ’ ಎನ್ನುತ್ತಾರೆ’ ಎಂದು ಸ್ಪಷ್ಟನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.