ADVERTISEMENT

ವಕ್ಫ್ ಆಸ್ತಿ ರಕ್ಷಣೆ ಕುರಿತು ಸಂಸತ್‌ನಲ್ಲಿ ಶೋಭಾ ಪ್ರಶ್ನೆ: ದಾಖಲೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 14:29 IST
Last Updated 5 ನವೆಂಬರ್ 2024, 14:29 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ವಿಜಯಪುರ: 2024ರ ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿಯು ವಕ್ಫ್‌ ಆಸ್ತಿ ಸಂರಕ್ಷಣೆ ಮಾಡುವುದಾಗಿ ಭರವಸೆ ನೀಡಿರುವ ಹಾಗೂ ಸಂಸತ್ತಿನಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರು ವಕ್ಫ್ ಆಸ್ತಿ ರಕ್ಷಣೆ ಸಂಬಂಧ ಪ್ರಶ್ನೆ ಕೇಳಿರುವ ಕುರಿತು ದಾಖಲೆಗಳನ್ನು ಕಾಂಗ್ರೆಸ್‌ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಣಾಳಿಕೆ ಪ್ರತಿಯನ್ನು ಪ್ರದರ್ಶಿಸಿದ ಕಾಂಗ್ರೆಸ್‌ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ‘ರಾಜಕೀಯ ಕಾರಣಕ್ಕೆ ವಕ್ಫ್‌ ವಿವಾದ ಎಬ್ಬಿಸಿರುವ ಬಿಜೆಪಿ ಮುಖಂಡರು ತಮ್ಮ ಪ್ರಣಾಳಿಕೆಯನ್ನು ಒಮ್ಮೆ ನೋಡಿ, ಸ್ವವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ದೇಶದಲ್ಲಿ ಇರುವ ವಕ್ಪ್ ಆಸ್ತಿ ಎಷ್ಟು, ಒತ್ತುವರಿ ಆಗಿರುವ ಆಸ್ತಿ ಎಷ್ಟು? ವಕ್ಪ್ ಆಸ್ತಿ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು, ವಕ್ಫ್‌ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲಿಕರಣ ಮಾಡಬೇಕು’ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಹಿಂದೆ ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದೀಗ ಯಾವ ನೈತಿಕತೆ ಆಧಾರದ ಮೇಲೆ ವಿಜಯಪುರದಲ್ಲಿ ಧರಣಿ ಕುಳಿತಿದ್ದಾರೆ' ಎಂದು ಪ್ರಶ್ನಿಸಿದರು. 

ADVERTISEMENT

ಪ್ರಶ್ನೆ ಕೇಳಿರುವುದು ಸತ್ಯ: ಕರಂದ್ಲಾಜೆ

ಕಾಂಗ್ರೆಸ್‌ ಎತ್ತಿರುವ ನೈತಿಕತೆ ಪ್ರಶ್ನೆಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವೆ ಕರಂದ್ಲಾಜೆ, ‘ಸಂಸತ್ತಿನಲ್ಲಿ ನಾನು ವಕ್ಫ್‌ ಆಸ್ತಿ ರಕ್ಷಣೆ ಕುರಿತು ಮಾತನಾಡಿರುವುದು ಸತ್ಯ. ಕಾಂಗ್ರೆಸ್‌ನವರು ನನ್ನ ಭಾಷಣ ಬಿಡುಗಡೆ ಮಾಡಿರುವುದನ್ನು ಸ್ವಾಗತಿಸುತ್ತೇನೆ’ ಎಂದು ಹೇಳಿದರು.

‘ಅನ್ವರ್‌ ಮಾಣಿಪಾಡಿ ವರದಿ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್‌ ಮುಖಂಡರು 29 ಸಾವಿರ ಎಕರೆ ವಕ್ಫ್‌ ಭೂಮಿಯನ್ನು ನುಂಗಿ, ನೀರು ಕುಡಿದಿದ್ದಾರೆ. ಅಲ್ಲಾಹುನ ಹೆಸರಿನಲ್ಲಿರುವ ವಕ್ಫ್‌ ಆಸ್ತಿಯನ್ನು ದೋಖಾ ಮಾಡಿದ್ದಾರೆ. ಈ ಕಾರಣಕ್ಕೆ ನಾನು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಮುಸ್ಲಿಂ ಧರ್ಮದಲ್ಲಿ ಹುಟ್ಟಿದವರೇ ಅಲ್ಲಾಹುಗೆ ಮೋಸ ಮಾಡಿದ್ದಾರೆ. ಹಾಗಾದರೆ, ವಕ್ಫ್‌ ಆಸ್ತಿ ರಕ್ಷಣೆ ಮಾಡುವವರು ಯಾರು? ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುತ್ತಿದೆ’ ಎಂದು ಸಮರ್ಥಿಸಿಕೊಂಡರು.

‘ನಿಜವಾದ ವಕ್ಫ್‌ ಆಸ್ತಿ ಎಷ್ಟು? ಈ ದೇಶದಲ್ಲಿ ದೇವರ ಹೆಸರಿನಲ್ಲಿ ದಾನ ಕೊಟ್ಟ ಭೂಮಿ ಎಷ್ಟಿದೆ? ಕರ್ನಾಟಕದಲ್ಲಿ ದಾನ ಕೊಟ್ಟ ಭೂಮಿ ಎಷ್ಟು? ಯಾರಿಗೂ ಮೋಸ ಆಗಬಾರದು ಎಂಬುದು ನನ್ನ ಉದ್ದೇಶವಾಗಿದೆ. ಈ ಕಾರಣಕ್ಕಾಗಿಯೇ ಅನ್ವರ್‌ ಮಾಣಿಪಾಡಿ ವರದಿಯನ್ನು ಸಿಬಿಐಗೆ ಒಪ್ಪಿಸುವಂತೆ ನಾನು ಆರಂಭದಿಂದಲೂ ಒತ್ತಾಯಿಸುತ್ತಾ ಬಂದಿದ್ದೇನೆ’ ಎಂದರು.

ಕಾಂಗ್ರೆಸ್ ನಾಯಕರಿಂದಲೇ ಒತ್ತುವರಿ: ಬಸನಗೌಡ ಪಾಟೀಲ

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಮರುಲ್ಲಾ ಇಸ್ಲಾಂ, ರೆಹಮಾನ್‌ ಖಾನ್‌, ಸಿ.ಎಂ.ಇಬ್ರಾಹಿಂ, ಹ್ಯಾರಿಸ್‌ ಮುಂತಾದವರು ಸುಮಾರು ₹2.70 ಲಕ್ಷ ಕೋಟಿ ಮೌಲ್ಯದ ವಕ್ಫ್‌ ಆಸ್ತಿಯನ್ನು ನುಂಗಿ ನೀರು ಕುಡಿದ್ದಾರೆ ಎಂದು ಅನ್ವರ್‌ ಮಾಣಿಪಾಡಿ ವರದಿಯಲ್ಲಿ ಇದೆ’ ಎಂದು ಶಾಸಕ ಬಸನಗೌಡ ಪಾಟೀಲ ಹೇಳಿದರು.

‘ವಕ್ಫ್‌ನಿಂದ ಯಾವುದೇ ಮುಸ್ಲಿಮರಿಗೆ ಅನುಕೂಲವಾಗಿಲ್ಲ. ಹೀಗಾಗಿ ವಕ್ಫ್‌ ಆಸ್ತಿಯನ್ನು ರಕ್ಷಣೆ ಮಾಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಇದರಲ್ಲಿ ತಪ್ಪೇನಿದೆ’ ಎಂದು ಕಾಂಗ್ರೆಸ್‌ ಮುಖಂಡರಿಗೆ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.