ADVERTISEMENT

ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ನೀಡುವ ವಿಚಾರದಲ್ಲಿ ತಮಿಳರನ್ನು ನೋಡಿ ಕಲಿಯಬೇಕು: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 9:21 IST
Last Updated 29 ಏಪ್ರಿಲ್ 2023, 9:21 IST
ಎಚ್.ಡಿ.ದೇವೇಗೌಡ
ಎಚ್.ಡಿ.ದೇವೇಗೌಡ   

ಪಿರಿಯಾಪಟ್ಟಣ/ ಕೆ.ಆರ್‌.ನಗರ (ಮೈಸೂರು ಜಿಲ್ಲೆ): ‘ತಮಿಳುನಾಡಿನ ಜನರನ್ನು ನೋಡಿ ನಾವು ಕಲಿಯುವುದು ಬಹಳಷ್ಟಿದೆ. ಅಲ್ಲಿ ಕಾಂಗ್ರೆಸ್‌, ಬಿಜೆಪಿ ಇಲ್ಲ. ಜನ ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ನೀಡಿದ್ದಾರೆ. ಅಭಿವೃದ್ಧಿಗಾಗಿ ಇಲ್ಲಿಯೂ ಜೆಡಿಎಸ್‌ ಬೆಂಬಲಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಪಿರಿಯಾಪಟ್ಟಣದಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಪಂಚರತ್ನ ಯೋಜನೆ ಜಾರಿಗೆ ತಂದರೆ, ರೈತರಿಗೆ ಕೃಷಿ ಕಾರ್ಮಿಕರು, ಎಲ್ಲ ಸಮುದಾಯಗಳಿಗೆ ಅನುಕೂಲವಾಗಲಿದೆ’ ಎಂದರು.

‘ಜೆಡಿಎಸ್ 25 ಸ್ಥಾನ ಗೆಲ್ಲುವುದಿಲ್ಲ ಎಂದು ಮೈಸೂರು ಭಾಗದ ಕಾಂಗ್ರೆಸ್‌ ನಾಯಕರೊಬ್ಬರು ಲಘುವಾಗಿ ಮಾತನಾಡುತ್ತಿದ್ದಾರೆ. ಅನ್ನಭಾಗ್ಯ, ಕ್ಷೀರ ಭಾಗ್ಯ ಕೊಟ್ಟೆ ಎಂದು ಹೇಳಿಕೊಳ್ಳುವವರು, ಸಮ್ಮಿಶ್ರ ಸರ್ಕಾರವಿದ್ದಾಗ, ರೈತರ ಸಾಲ ಮನ್ನಾ ಮಾಡಲು ಹಣ ಎಲ್ಲಿಂದ ತರುತ್ತೀರಿ ಎಂದು ಕಾಲೆಳೆದಿದ್ದರು’ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

ADVERTISEMENT

‘ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗಲೂ ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಕಾಂಗ್ರೆಸ್‌ನವರೇ ನಮ್ಮ ಮನೆ ಬಾಗಿಲಿಗೆ ಬಂದು ಬೆಂಬಲ ನೀಡಿದರು. ಹಠದಿಂದ ಸರ್ಕಾರ ರಚಿಸಿ, ನಂತರ ತೆಗೆದರು’ ಎಂದು ಆರೋಪಿಸಿದರು.

ಪಕ್ಷದ ಅಭ್ಯರ್ಥಿ ಕೆ.ಮಹದೇವ್ ಅವರನ್ನು ಕುರಿತು ಮಾತನಾಡಿದ ಅವರು, ‘90 ವರ್ಷ ವಯಸ್ಸಿನಲ್ಲಿಯೂ ನಾನು ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ. ಗಟ್ಟಿಮುಟ್ಟಾಗಿರುವ ನೀವು ಇದೇ ನನ್ನ ಕೊನೇ ಚುನಾವಣೆ ಎಂದು ಹೇಳಬಾರದು’ ಎಂದು ಉತ್ತೇಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.