ಬೆಂಗಳೂರು: ‘ಕಾಂಗ್ರೆಸ್‌ನವರು ಮೇಕೆದಾಟು ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯವಾಗಿಯೇ ಉತ್ತರ ಕೊಡಲು ಸತ್ಯವನ್ನು ತಿಳಿಸಿದ್ದೇವೆ. ಜಾಹೀರಾತಿನಲ್ಲಿ ನಾನು ನನ್ನ ಅಥವಾ ಮುಖ್ಯಮಂತ್ರಿ ಫೋಟೊ ಹಾಕಿಕೊಂಡಿಲ್ಲ. ಜನರಿಗೆ ಇದ್ದುದನ್ನು ಇದ್ದಂತೆ ತೋರಿಸಿದ್ದೇವೆ. ಸರ್ಕಾರದ ಕಡತದಲ್ಲಿದ್ದ ಮಾಹಿತಿಯನ್ನು ಮುಂದಿಟ್ಟಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಅವರಿಗೆ (ಕಾಂಗ್ರೆಸ್) ಹೋರಾಟ ಮಾಡುವ ಅಧಿಕಾರ ಇದೆ, ಮಾಡಲಿ. ಮೇಕೆದಾಟು ಯೋಜನೆ ಬಗ್ಗೆ 2013ರಿಂದ 2018ರವರೆಗೆ ನಡೆದ ಸತ್ಯವನ್ನು ಜನರ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡಿದ್ದೇನೆ. ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ ಅವರಿಗೆ ಸತ್ಯ ಕಹಿ ಯಾಕೆ ಆಯಿತೊ ಗೊತ್ತಿಲ್ಲ. ಅವರು ನನ್ನ ವಿರುದ್ಧ ಕಟ್ಟು ಶಬ್ಧಗಳಿಂದ ಯಾಕೆ ಮಾತನಾಡಿದ್ದಾರೊ ಗೊತ್ತಿಲ್ಲ. ನಾನು ಎಂದೂ ಸತ್ಯ ಮುಚ್ಚಿಟ್ಟಿಲ್ಲ. ಸುಳ್ಳು ಹೇಳಿಲ್ಲ’ ಎಂದರು.
‘ಎಂ.ಬಿ. ಪಾಟೀಲ ಅವರ ಬಗ್ಗೆ ವೈಯಕ್ತಿಕವಾಗಿ ಒಂದೂ ಶಬ್ದ ಕೂಡ ಮಾತನಾಡಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎರಡೂವರೆ ವರ್ಷದಿಂದ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ ಅಂದರು. ಅದನ್ನು ಹೇಳಿದ್ದೇನೆ. ಅವಾಚ್ಯವಾಗಿ ಮಾತನಾಡುವುದು ನನ್ನ ಸಂಸ್ಕೃತಿಯೂ ಅಲ್ಲ. ಸಂಸ್ಕಾರವೂ ಅಲ್ಲ. ನನ್ನ ತಂದೆ–ತಾಯಿ ಅದನ್ನು ನನಗೆ ಕಲಿಸಿಲ್ಲ’ ಎಂದು ಹೇಳಿದರು.
‘ಎಂ.ಬಿ. ಪಾಟೀಲರು ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ನಾಲಿಗೆ ಹರಿಬಿಡುವಾಗ ಸ್ವಲ್ಪ ಜ್ಞಾನದಿಂದ ಮಾತನಾಡಬೇಕು. ನನ್ನನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಅವರು ಹೇಳಿದ್ದಾರೆ. ಬಹುಶಃ ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನಿ ನರೇಂದ್ರ ಮೋದಿ ಸ್ಥಾನದಲ್ಲಿ ಇದ್ದಂತೆ ಕಾಣಿಸುತ್ತದೆ. ಅದಕ್ಕಿಂತ ಹೆಚ್ಚು ನಾನು ಏನೂ ಹೇಳುವುದಿಲ್ಲ’ ಎಂದು ವ್ಯಂಗ್ಯವಾಡಿದರು.
‘ಟೀಕೆ, ಟಿಪ್ಪಣಿ ಮಾಡುವುದೇ ಪ್ರಜಾಪ್ರಭುತ್ವದ ಸೌಂದರ್ಯ. ಆದರೆ, ಸಂಸ್ಕಾರವಂತರಾಗಿ, ಜನರ ಮುಂದೆ ಮಾದರಿಯಾಗಿ ಇರಬೇಕೇ ಹೊರತು ರೌಡಿ ಥರ ಯಾರೂ ಮಾತನಾಡಬಾರದು. ವೈಯಕ್ತಿಕವಾಗಿ ನನಗೆ ಯಾರ ಬಗ್ಗೆಯೂ ದ್ವೇಷ, ಅಸೂಯೆ ಇಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.