ಹುಬ್ಬಳ್ಳಿ: ಸಿನಿಮಾ ರಂಗದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಲು ಮಹಿಳಾ ಕಲಾವಿದರು ಸೇರಿ
ಕೊಂಡು ‘ಆಂತರಿಕ ದೂರು ಸಮಿತಿ’ ರಚಿಸಿಕೊಳ್ಳುತ್ತಿದ್ದೇವೆ ಎಂದು ಚಲನಚಿತ್ರ ನಟಿ ಶ್ರುತಿ ಹರಿಹರನ್ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣದಲ್ಲಿ ಮೀ–ಟೂ ಅಭಿಯಾನ ಆರಂಭವಾದ ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅನೇಕ ಪ್ರಕರಣಗಳ ಬಹಿರಂಗಗೊಂಡಿವೆ. ಲೈಂಗಿಕ ದೌರ್ಜನ್ಯ ವಿರುದ್ಧ ಅರಿವು ಮೂಡಿಸಲು ‘ಫೈರ್’ ಸಂಸ್ಥೆ ಹುಟ್ಟು ಹಾಕುತ್ತಿದ್ದೇವೆ. ಸಂಸ್ಥೆಯ ಭಾಗವಾಗಿ ದೂರು ಸಮಿತಿ ಇರಲಿದೆ. ಇದಕ್ಕೆ ಕವಿತಾ ಲಂಕೇಶ್ ನಿರ್ದೇಶಕಿಯಾಗಿದ್ದು, ಪ್ರಿಯಾಂಕಾ ಉಪೇಂದ್ರ, ಅಹಿಂಸಾ ಚೇತನ್ ಹಾಗೂ ನಾನು ಸದಸ್ಯರಾಗಿದ್ದೇವೆ’ ಎಂದರು.
‘ಅಭಿಯಾನ ಆರಂಭವಾದ ಬಳಿಕ ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ. ಇದರಿಂದ ದೊಡ್ಡವರೆನಿಸಿಕೊಂಡವರ ಹೆಸರು ಬಹಿರಂಗಗೊಳ್ಳುತ್ತಿದೆ. ಮಹಿಳೆ ತಾನು ಅನುಭವಿಸಿದ ಕಷ್ಟವನ್ನು ಯಾವಾಗ ಹೇಳಿದರೂ ಸತ್ಯ ಸತ್ಯವೇ ಆಗಿರುತ್ತದೆ. ಎಲ್ಲರ ಮೇಲೆ ಕ್ರಮ ಕೈಗೊಳ್ಳಲು ಆಗದಿದ್ದರೂ, ಕೆಲವರಿಗೆ ಶಿಕ್ಷೆಯಂತೂ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.