ADVERTISEMENT

ಶೌಚದ ಗುಂಡಿಗೆ ಇಳಿಸಿದರೆ ಕಠಿಣ ಕ್ರಮ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 15:05 IST
Last Updated 31 ಜನವರಿ 2024, 15:05 IST
ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯೋಜಿಸಿದ ಸಫಾಯಿ ಕರ್ಮಚಾರಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಫಾಯಿ ಕರ್ಮಚಾರಿಗಳಿಗೆ ನಗದು ಸಹಾಯಧನ ವಿತರಿಸರಿದರು. ಎಚ್.ಸಿ.ಮಹದೇವಪ್ಪ, ಕೆ.ಎಸ್. ಬಸವಂತಪ್ಪ, ಎನ್. ಶ್ರೀನಿವಾಸಯ್ಯ ಉಪಸ್ಥಿತರಿದ್ದರು–ಪ್ರಜಾವಾಣಿ ಚಿತ್ರ.
ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯೋಜಿಸಿದ ಸಫಾಯಿ ಕರ್ಮಚಾರಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಫಾಯಿ ಕರ್ಮಚಾರಿಗಳಿಗೆ ನಗದು ಸಹಾಯಧನ ವಿತರಿಸರಿದರು. ಎಚ್.ಸಿ.ಮಹದೇವಪ್ಪ, ಕೆ.ಎಸ್. ಬಸವಂತಪ್ಪ, ಎನ್. ಶ್ರೀನಿವಾಸಯ್ಯ ಉಪಸ್ಥಿತರಿದ್ದರು–ಪ್ರಜಾವಾಣಿ ಚಿತ್ರ.   

ಬೆಂಗಳೂರು: ಸಫಾಯಿ ಕರ್ಮಚಾರಿಗಳನ್ನು ಶೌಚದ ಗುಂಡಿಗೆ ಇಳಿಸಿ, ಕೆಲಸ ಮಾಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಬುಧವಾರ ಹಮ್ಮಿಕೊಂಡಿದ್ದ ಸಫಾಯಿ ಕರ್ಮಚಾರಿಗಳಿಗೆ ಸಹಾಯಧನ ವಿತರಣೆ ಮತ್ತು ಪುನರ್ವಸತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪೌರ ಕಾರ್ಮಿಕರು ಘನತೆಯಿಂದ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಕಾಂಗ್ರೆಸ್‌ ಪಕ್ಷ ಹಾಗೂ ರಾಜ್ಯ ಸರ್ಕಾರದ ಆಶಯ. ಅದಕ್ಕಾಗಿಯೇ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಫಾಯಿ ಕರ್ಮಚಾರಿಗಳ ವೇತನವನ್ನು ₹7 ಸಾವಿರದಿಂದ ₹17 ಸಾವಿರಕ್ಕೆ ಹೆಚ್ಚಳ ಮಾಡಲಾಯಿತು. ಮನೆ ಕಟ್ಟಿಕೊಳ್ಳಲು ₹7.50 ಲಕ್ಷ ನೆರವು ನೀಡುವ ಕಾರ್ಯಕ್ರಮ ಜಾರಿಗೆ ತರಲಾಯಿತು ಎಂದರು.

ADVERTISEMENT

‘ಅಂಬೇಡ್ಕರ್‌ ಅವರು ಈ ದೇಶಕ್ಕೆ ಸಮಾನತೆಯ ಸಂವಿಧಾನ ನೀಡದೆ ಹೋಗಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಸಂವಿಧಾನ ವಿರೋಧಿಗಳು ನಮ್ಮೆಲ್ಲರ ವಿರೋಧಿಗಳು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಂಥವರನ್ನು ಜನರು ತಿರಸ್ಕರಿಸಬೇಕು’ ಎಂದು ಕೋರಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಇತಿಹಾಸದಲ್ಲೇ ಮೊದಲ ಬಾರಿ 101 ಶೋಷಿತ ಸಮುದಾಯಗಳ ಪಟ್ಟಿಯಲ್ಲಿ ಕೊನೆಯಲ್ಲಿ ಗುರುತಿಸಿಕೊಂಡಿರುವ ಸಫಾಯಿ ಕರ್ಮಚಾರಿಗಳ ಬದುಕಿಗೆ ನೇರವಾಗಿ ಹಣಕಾಸಿನ ನೆರವು ನೀಡಲಾಗಿದೆ. 4 ಸಾವಿರ ಸಫಾಯಿ ಕರ್ಮಚಾರಿಗಳಿಗೆ ತಲಾ ₹40 ಸಾವಿರ ಸಹಾಯಧನ ವಿತರಿಸಲಾಗಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.