ಬೆಂಗಳೂರು:‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸಿರುವುದನ್ನು ನೋಡಿದರೆ ಅವರಿಗೆ ದೇಶದ ಏಕತೆಗಿಂತ ಅಧಿಕಾರಕ್ಕಾಗಿ ಸಮಾಜ ಪಡೆಯುವುದೇ ಮುಖ್ಯ ಎನ್ನುವುದನ್ನು ತೋರಿಸುತ್ತದೆ’ ಎಂದು ಬಿಜೆಪಿ ಕಿಡಿ ಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ದೇಶದಲ್ಲಿ ಎಲ್ಲ ಧರ್ಮೀಯರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿರುವ ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸುವುದು ಅವರ ಜಿಹಾದಿ ಮನಸ್ಥಿತಿಯನ್ನು ತೋರಿಸುತ್ತದೆ. ವಂದೇ ಮಾತರಂ ಅವರಿಗೆ ಅಪಥ್ಯ’ ಎಂದು ಹೇಳಿದೆ.
‘ಬ್ರಿಟಿಷರು ವಂದೇ ಮಾತರಂ ಹಾಡನ್ನು ವಿರೋಧಿಸಿದ್ದರು. ಈಗ ಅದೇ ಸಾಲಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದ್ದಾರೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಮೂಲಕ ಭಾರತೀಯರ ಏಕತೆಯ ಭಾವನೆಯನ್ನು ವಿಭಜಿಸುವ ಪ್ರಯತ್ನ ಮಾಡಿದ್ದು, ಭಾರತೀಯರ ಕ್ಷಮೆ ಕೋರಬೇಕು’ ಎಂದೂ ಬಿಜೆಪಿ ಒತ್ತಾಯಿಸಿದೆ.
ಸಂವಿಧಾನದ ಆಶಯಗಳಿಗೆ ಕೊಳ್ಳಿ:
‘ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೇ ಕಾಂಗ್ರೆಸ್ ಪಕ್ಷ. ಸಂಸತ್ತಿನಲ್ಲಿ ಚರ್ಚೆ ಮಾಡದೇ 40 ಸೆಕೆಂಡುಗಳಲ್ಲಿ ಇಂದಿರಾಗಾಂಧಿ ಮಸೂದೆ ಅಂಗೀಕರಿಸಿ, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ತುರ್ತುಪರಿಸ್ಥಿತಿಯನ್ನು ಹೇರಿದರು. ಅಲ್ಲದೇ, ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ದೇಶದಲ್ಲಿ ಎರಡೆರಡು ಧ್ವಜ ಹಾರಿಸಿದ್ದೂ ಕಾಂಗ್ರೆಸ್ ಪಕ್ಷ’ ಎಂದು ಬಿಜೆಪಿ ಹರಿಹಾಯ್ದಿದೆ.
ಕಾಂಗ್ರೆಸ್ ತನ್ನ ಟ್ವೀಟ್ ಮೂಲಕ, ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದೆ. ಮಾಹಿತಿ ಕಳ್ಳತನದ ಮೂಲಕ ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದೆ ಎಂದು ಟೀಕಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.