ಬೆಂಗಳೂರು: ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆ ಹಾಗೂ ಅದಕ್ಕೆ ಎದುರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉರುಳಿಸುತ್ತಿರುವ ರಾಜಕೀಯ ದಾಳಗಳು ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಹತ್ವ ಪಡೆಯುತ್ತಿವೆ.
ರಾಜ್ಯದಲ್ಲಿ ಕಾಂಗ್ರೆಸ್ 2023ರಲ್ಲಿ ಅಧಿಕಾರಕ್ಕೆ ಮರಳಿದಾಗ ಮುಖ್ಯಮಂತ್ರಿ ಹುದ್ದೆಗಾಗಿ ಶಿವಕುಮಾರ್ ಲಾಬಿ ನಡೆಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ, ಶಿವಕುಮಾರ್ ಅವರು ಆ ಹುದ್ದೆಗೆ ಏರುವುದು ಯಾವಾಗ ಎಂಬ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಲೇ ಇವೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಸೋಮವಾರ ಮತದಾರರನ್ನು ಉದ್ದೇಶಿಸಿ, ಕೆಲವು ಸ್ಪಷ್ಟ ಸಂದೇಶಗಳನ್ನು ರವಾನಿಸಿದರು. ಆ ಮೂಲಕ ಈ ಚುನಾವಣೆಯಲ್ಲಿ ತಾವು ಪಣಕ್ಕೆ ಒಡ್ಡಿರುವುದು ಏನನ್ನು ಎಂಬುದನ್ನು ಸೂಚ್ಯವಾಗಿ ಹೇಳಿದರು.
‘ನಾನು ನಿಮಗೆ ಬೇಕೋ ಬೇಡವೋ’ ಎಂದು ಸಿದ್ದರಾಮಯ್ಯ ಅವರು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರನ್ನು ಉದ್ದೇಶಿಸಿ ಕೇಳಿದರು. ವರುಣ ಕ್ಷೇತ್ರವು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಕನಿಷ್ಠ 60 ಸಾವಿರ ಮತಗಳ ಮುನ್ನಡೆ ಪಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದರು. ‘ಅದು ಸಾಧ್ಯವಾದರೆ ನನಗೆ ಖುಷಿಯಾಗುತ್ತದೆ. ಆಗ ನನ್ನನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಕೂಡ ಅವರು ಹೇಳಿದರು.
ವರುಣ ತಮ್ಮ ಪಾಲಿಗೆ ಅದೃಷ್ಟದ ಕ್ಷೇತ್ರ ಎಂದೂ ಸಿದ್ದರಾಮಯ್ಯ ಹೇಳಿದರು. ‘2013ರಲ್ಲಿ ನಾನು ಇಲ್ಲಿ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ, ನಂತರ ಮುಖ್ಯಮಂತ್ರಿಯಾದೆ. ಕಳೆದ ವರ್ಷ ನಾನು 48 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಕಂಡೆ, ಎರಡನೆಯ ಬಾರಿಗೆ ಮುಖ್ಯಮಂತ್ರಿ ಆದೆ’ ಎಂದು ವಿವರಿಸಿದರು.
ವರುಣ ಕ್ಷೇತ್ರದಿಂದ ಸರಿಸುಮಾರು 50 ಕಿ.ಮೀ. ದೂರದಲ್ಲಿ, ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಮಂಡ್ಯದಲ್ಲಿ ಮತದಾರರನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು. ‘ಒಂದು ವಿಷಯ ಹೇಳಬೇಕು. ಮಂಡ್ಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ನೀವು ಕಾಂಗ್ರೆಸ್ಸಿಗೆ (ವಿಧಾನಸಭಾ ಚುನಾವಣೆಯಲ್ಲಿ) ನೀಡಿದಾಗ ನಿಮ್ಮ ಮನಸ್ಸಿನಲ್ಲಿ ಇದ್ದಿದ್ದು ನಾನು. ನಿಮ್ಮ ಹಾರೈಕೆಯು ನಿರರ್ಥಕವಾಗುವುದಿಲ್ಲ. ಅದರ ಬಗ್ಗೆ ಚಿಂತೆ ಬೇಡ’ ಎಂದು ಹೇಳಿದರು.
ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಉದ್ದೇಶದಿಂದ ಒಕ್ಕಲಿಗ ಸಮುದಾಯದ ಮತಗಳು ಒಗ್ಗೂಡಿದ್ದರಿಂದ ಪಕ್ಷಕ್ಕೆ ಈ ಗೆಲುವು ಸಾಧ್ಯವಾಯಿತು ಎಂಬ ವಿಶ್ಲೇಷಣೆಗಳು ಇವೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸರ್ಕಾರ ರಚನೆಯಾದಾಗ ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಕಡೆಯ ಬಾರಿ ಮುಖ್ಯಮಂತ್ರಿ ಆಗಿದ್ದು 1999ರಲ್ಲಿ, ಆಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಈ ವಿಷಯವನ್ನು ಶಿವಕುಮಾರ್ ಅವರು ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿದ್ದರು.
ಹಳೆ ಮೈಸೂರು ಪ್ರಾಂತ್ಯದ ಆದ್ಯಂತ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಸಮುದಾಯದ ಬೆಂಬಲವನ್ನು ಸೋಮವಾರದ ಭಾಷಣದಲ್ಲಿ ಕೋರಿದ ಶಿವಕುಮಾರ್ ಅವರು, ‘ಕಾಂಗ್ರೆಸ್ ಪಕ್ಷವು ಎಂಟು ಮಂದಿ ಒಕ್ಕಲಿಗರನ್ನು ಹಾಗೂ ಆರು ಮಂದಿ ಮಹಿಳೆಯರನ್ನು ಕಣಕ್ಕೆ ಇಳಿಸಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷನಾಗಿ ನಾನು ಈ ದೊಡ್ಡ ತೀರ್ಮಾನ ಕೈಗೊಂಡಿದ್ದೇನೆ’ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ಜಯ ಸಾಧಿಸಿದರೆ ತಮ್ಮ ತಂದೆ ಸಿದ್ದರಾಮಯ್ಯ ಅವರು ಐದು ವರ್ಷ ಯಾವ ಅಡ್ಡಿಯೂ ಇಲ್ಲದೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಡಾ. ಯತೀಂದ್ರ ಅವರು ಈ ವರ್ಷದ ಆರಂಭದಲ್ಲಿ ಹೇಳಿದ್ದರು. ಸೀಟುಗಳ ಲೆಕ್ಕಾಚಾರದಲ್ಲಿ ಬಿಜೆಪಿಯನ್ನು ಹಿಂದಿಕ್ಕಲು ಕಾಂಗ್ರೆಸ್ಸಿಗೆ ಸಾಧ್ಯವಾಗದೆ ಇದ್ದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯನ್ನು ಕಳೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಕಳೆದ ತಿಂಗಳು ಹೇಳಿದ್ದರು.
ಕಾಂಗ್ರೆಸ್ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಅಧಿಕಾರ ಹಂಚಿಕೆಯ ಸೂತ್ರವೊಂದನ್ನು ರೂಪಿಸಲಾಗಿದೆ. ಅದರ ಅನ್ವಯ, ಮುಖ್ಯಮಂತ್ರಿ ಹುದ್ದೆಯನ್ನು ಇವರಿಬ್ಬರೂ ತಲಾ ಎರಡೂವರೆ ವರ್ಷ ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.