ADVERTISEMENT

ಪಾಕ್‌ ಪ್ರಧಾನಿಯಿಂದ ಟಿಪ್ಪು ಸ್ಮರಣೆ: ಸಿದ್ದರಾಮಯ್ಯ– ರಾಜೀವ್‌ ಟ್ವೀಟ್‌ ಸಮರ

​ಪ್ರಜಾವಾಣಿ ವಾರ್ತೆ
Published 5 ಮೇ 2019, 20:15 IST
Last Updated 5 ಮೇ 2019, 20:15 IST
   

ಬೆಂಗಳೂರು: ಟಿ‍ಪ್ಪು ಸುಲ್ತಾನ್‌ ಸಂಸ್ಮರಣೆ ಸಂಬಂಧ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಟ್ವೀಟ್‌ ವಿಚಾರದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ನಡುವೆ ಟ್ವೀಟ್‌ ಸಮರ ನಡೆದಿದೆ.

‘ಮೇ 4 ಟಿ‌ಪ್ಪು ಸುಲ್ತಾನ್‌ ಕೊನೆಯುಸಿರೆಳೆದ ದಿನ. ಗುಲಾಮಗಿರಿಯ ಜೀವನ ನಡೆಸುವುದಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸತ್ತ ಟಿಪ್ಪು ಅವರನ್ನು ನಾನು ಮೆಚ್ಚುತ್ತೇನೆ’ ಎಂದು ಇಮ್ರಾನ್‌ ಖಾನ್‌ ಶನಿವಾರ ಟ್ವೀಟ್ ಮಾಡಿದ್ದರು. ರೀಟ್ವೀಟ್‌ ಮಾಡಿದ್ದ ರಾಜೀವ್‌ ಚಂದ್ರಶೇಖರ್‌, ‘ಪ್ರೀತಿಯ ಸಿದ್ದರಾಮಯ್ಯ ಅವರೇ, ಇಮ್ರಾನ್‌ ಅವರನ್ನು ಅಪ್ಪಿಕೊಳ್ಳಲು ಇದು ಸೂಕ್ತ ಸಮಯ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ‍ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ನೆಚ್ಚಿನ ವ್ಯಕ್ತಿಯಾಗಲು ಇದು ಸುಲಭದ ಮಾರ್ಗ’ ಎಂದು ಕಾಲೆಳೆದಿದ್ದರು.

ADVERTISEMENT

ಇದಕ್ಕೆ ಖಾರವಾಗಿಯೇ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಮಿಸ್ಟರ್‌ ರಾಜೀವ್‌ ಅವರೇ, ಟ್ವೀಟ್‌ ಮಾಡುವ ಮೊದಲು ಯೋಜಿಸಿ. ಶತ್ರು ರಾಷ್ಟ್ರದ ಪ್ರಧಾನಿ ಜತೆಗೆ ಬಿರಿಯಾನಿ ತಿನ್ನಲು ನಾನು, ನಿಮ್ಮ ಚೋರ್‌ ನರೇಂದ್ರ ಮೋದಿ ಅಲ್ಲ. ಬಾಸ್‌ಗಳನ್ನು ಖುಷಿಪಡಿಸಲು ನೈತಿಕತೆಯ ಜತೆಗೆ ರಾಜಿ ಮಾಡಿಕೊಳ್ಳುವ ನಿಮ್ಮ ರೀತಿಯ ವ್ಯಕ್ತಿ ಅಲ್ಲ. ನಿಮ್ಮ ಬಾಸ್‌ಗಳ ಗುಲಾಮನಾಗಿ ಬದುಕುವುದಕ್ಕಿಂತ ಟಿಪ್ಪು ಸುಲ್ತಾನ್‌ ಅವರ ರೀತಿಯಲ್ಲೇ ಸಾಯುವುದೇ ಲೇಸು’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.