ADVERTISEMENT

ಧರ್ಮ ರಾಜಕಾರಣದ ಹಸು ಬರಡಾಗುತ್ತಲೇ ಬಿಜೆಪಿಯಿಂದ ಭಾಷಾ ರಾಜಕಾರಣ: ಸಿದ್ದರಾಮಯ್ಯ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2022, 4:24 IST
Last Updated 29 ಏಪ್ರಿಲ್ 2022, 4:24 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು:ಧರ್ಮ ರಾಜಕಾರಣದ ಹಸು ಬರಡಾಗುತ್ತಲೇ, ಬಿಜೆಪಿಯಿಂದ ಭಾಷಾ ರಾಜಕಾರಣ ಆರಂಭವಾಗಿದೆ. ಹಿಂದಿ ಪರ ವಕಾಲತ್ತು ಹಾಕುತ್ತಿರುವ ಅಮಿತ್‌ ಶಾ ಅವರ ಗುಲಾಮಗಿರಿ ಬಿಟ್ಟುಬಿಜೆಪಿ ನಾಯಕರು ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಬೇಕು ಎಂದುವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಕನ್ನಡದ ನಟ ಕಿಚ್ಚ ಸುದೀಪ್‌ ಅವರ ಅಭಿಪ್ರಾಯ, ಇದಕ್ಕೆ ಪ್ರತಿಯಾಗಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರ ಹಿಂದಿ ರಾಷ್ಟ್ರಭಾಷೆ ಎಂಬ ವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಷಾ ವಿವಾದ ಹೊತ್ತಿಕೊಂಡಿದೆ. ಹಿಂದಿ ರಾಷ್ಟ್ರಭಾಷೆ ಎಂಬ ಅಭಿಪ್ರಾಯವನ್ನು ಬೆಂಬಲಿಸುವ ಹೇಳಿಕೆಗಳನ್ನು ಬಿಜೆಪಿಯ ಕೆಲ ನಾಯಕರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡವೇ ಈ ನೆಲದ ಸಾರ್ವಭೌಮ ಭಾಷೆ ಎಂದು ಪ್ರತಿಪಾದಿಸಿದ್ದಾರೆ.

ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ. ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ.

ADVERTISEMENT

ಭಾಷೆ, ಪ್ರದೇಶಗಳ ನಮ್ಮ ನೀತಿ-ನಿಲುವು "ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ... ಎನ್ನುವ ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದುದು. ಕನ್ನಡ ಭಾಷೆ ನಮಗೆ ರಾಜಕಾರಣದ ಆಯುಧ ಅಲ್ಲ, ಇದು ನಮ್ಮ ಜೀವದ ಉಸಿರು.

ಇಂಗ್ಲಿಷ್‌, ಹಿಂದಿ ಎಲ್ಲ ಭಾಷೆಗಳ ಬಗ್ಗೆ ನಮಗೆ ಗೌರವ ಇದೆ, ಇವೆಲ್ಲವೂ ಬೇಕು. ಈ ಭಾಷೆಗಳ ಮೂಲಕ ಹರಿದು ಬರುವ ಜ್ಞಾನದ ಅಮೃತವೂ ಬೇಕು. ಆದರೆ ಕನ್ನಡಕ್ಕೆ ಮೊದಲ ಆದ್ಯತೆ, ಮಾತೃಭಾಷೆಗೆ ಮೊದಲ ಪೂಜೆ.

ನಮ್ಮದು ಒಕ್ಕೂಟ ವ್ಯವಸ್ಥೆಯ ದೇಶ. ರಾಜ್ಯಗಳು ಭಾಷೆಯ ಆಧಾರದಲ್ಲಿ ರಚನೆಯಾಗಿವೆ. ಭಾಷಾವಾರು ಪ್ರಾಂತದಲ್ಲಿ ಪ್ರಾದೇಶಿಕ ಭಾಷೆಯನ್ನು ಮನ್ನಿಸಬೇಕಾಗುತ್ತದೆ. ಕನ್ನಡ ನಮಗೆ‌ ಮಾತೃಭಾಷೆಯೂ ಹೌದು,‌ ಪರಿಸರದ ಭಾಷೆ ಕೂಡಾ.

ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪ್ರತಿಯೊಂದು ರಾಜ್ಯಭಾಷೆಯೂ ನಮ್ಮ ರಾಷ್ಟ್ರಭಾಷೆ, ನೆಲದ ಸಾರ್ವಭೌಮ ಭಾಷೆ. ಇದನ್ನೂ ಸಂವಿಧಾನವೂ ಅಂಗೀಕರಿಸಿದೆ. ಸಂವಿಧಾನವನ್ನೇ ವಿರೋಧಿಸುವ ದೇಶದ್ರೋಹಿಗಳಿಗೆ ಈ ಸಾಮಾನ್ಯ ಜ್ಞಾನದ ಅರಿವಿರಲಿ.

ಮಾತೃಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ, ಮಾತೃಭಾಷೆ ಎಂದರೆ ನಮ್ಮ ಭಾವನೆ, ಸಂಬಂಧ, ತನ್ನತನದ ಪ್ರಜ್ಞೆ, ಸಂಸ್ಕೃತಿ, ಇತಿಹಾಸ, ನೆಲ, ಜಲ, ಸಂಪತ್ತು ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಇದು ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಮೂರ್ಖರಿಗೆ ತಿಳಿದಿರಲಿ.

ಹಿಂದಿ ಭಾಷೆಯ ವಕಾಲತು ಮಾಡಲು ಹೊರಟಿರುವ ಸಿ.ಟಿ.ರವಿ, ಮುರುಗೇಶ್ ನಿರಾಣಿ, ರಮೇಶ್ ಜಿಗಜಿಣಗಿ ಮೊದಲಾದವರಿಗೆ ಆ ಭಾಷೆಯ ಬಗ್ಗೆಯೂ ಪ್ರೀತಿ ಇಲ್ಲ. ಇವರೆಲ್ಲ ತಮ್ಮ ದೆಹಲಿ ದೊರೆಗಳನ್ನು ಓಲೈಸಲು ಹೊರಟಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿಂದಿ ಪರ ವಕಾಲತು ಮಾಡಿದ ಕೂಡಲೇ ರಾಜ್ಯದ ಬಿಜೆಪಿ ನಾಯಕರು ಅವರನ್ನು ಓಲೈಸಲು ಸಾಲಲ್ಲಿ ನಿಂತಿದ್ದಾರೆ. ಬಿಜೆಪಿ ನಾಯಕರೇ, ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಿ.

ಕನ್ನಡ‌ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿ ನಾನು ರಾಜಕೀಯ ಜೀವನ ಪ್ರಾರಂಭಿಸಿದವನು. ನಾನು ಇಂದು,‌ ಮುಂದು, ಎಂದೆಂದೂ ಒಬ್ಬ ಕನ್ನಡದ ಕಾವಲುಗಾರ. ಕಳ್ಳರ ಜೊತೆ ಷಾಮೀಲಾಗುವ ಡೋಂಗಿ ಚೌಕಿದಾರ ಅಲ್ಲ.

ಕಾಂಗ್ರೆಸ್ ಬಹು ಧರ್ಮ, ಬಹುಭಾಷೆ, ಬಹು ಸಂಸ್ಕೃತಿಗಳನ್ನೊಳಗೊಂಡ ಬಹುತ್ವವನ್ನು ಒಪ್ಪಿಕೊಂಡ,‌‌ ಅಪ್ಪಿಕೊಂಡ ಪಕ್ಷ. ಒಂದು ಧರ್ಮ,‌ ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರುವುದು ಜನವಿರೋಧಿ‌ ಮಾತ್ರವಲ್ಲ ಸಂವಿಧಾನ ವಿರೋಧಿ ಕೂಡಾ ಆಗಿದೆ.

ಕನ್ನಡವನ್ನು ತುಳಿದು ಹಿಂದಿ ಹೇರಲು ಹೊರಟಿರುವ ಬಿಜೆಪಿ ನಾಯಕರ ಕುತಂತ್ರದ ರಾಜಕಾರಣವನ್ನು ಸ್ವಾಭಿಮಾನಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ.‌ ನಮ್ಮೆದುರಿಗೆ ಗೋಕಾಕ್ ಹೋರಾಟದ ಮಾದರಿ ಇದೆ.

ನಮ್ಮ ಚಂದನವನದ ಕನ್ನಡ ಚಿತ್ರಗಳು, ಬಾಲಿವುಡ್ ಚಿತ್ರಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ‌ ಯಶಸ್ಸು ಕಾಣುವುದನ್ನು‌ ಸಹಿಸದ ಹಿಂದಿ ಚಿತ್ರನಟರು ಕನ್ನಡದ ವಿರುದ್ಧ ನಂಜು ಕಾರುತ್ತಿದ್ದಾರೆ. ಕನ್ನಡ ಚಿತ್ರರಂಗ ಇದಕ್ಕೆ ಒಕ್ಕೊರಲಿನ ಉತ್ತರ ನೀಡಬೇಕಾಗಿದೆ.

ಬಿಜೆಪಿ ನಾಯಕರ ಹೇಳಿಕೆಗಳು

ಕನ್ನಡ ಪ್ರಾದೇಶಿಕ ಭಾಷೆ:ನಿರಾಣಿ

‘ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರ ಭಾಷೆ. ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ’ ಎಂದು ಕೈಗಾರಿಕಾ ಸಚಿವ‌ ಮುರುಗೇಶ ನಿರಾಣಿ ಪ್ರತಿಪಾದಿಸಿದರು.

‘ಹಿಂದಿ ರಾಷ್ಟ್ರ ಭಾಷೆ ಎಂಬ ತಿಳಿವಳಿಕೆ ಮೊದಲಿನಿಂದಲೂ ಇದೆ.‌ ಅದರಲ್ಲಿ ತಪ್ಪೇನಿಲ್ಲ. ಆದರೆ‌, ಮೊದಲ ಆದ್ಯತೆಯನ್ನು ಕನ್ನಡಕ್ಕೆ‌ ಕಡ್ಡಾಯವಾಗಿ ನೀಡಬೇಕು. ನಂತರ ಹಿಂದಿ, ಇಂಗ್ಲಿಷ್ ಕಲಿಯಬೇಕು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ನಂತರ, ಉಳಿದೆಲ್ಲ ಭಾಷೆಗಳನ್ನು ಪ್ರೀತಿಸೋಣ, ಕಲಿಯೋಣ. ಅದರಿಂದ ನಮ್ಮ ಭಾಷಾ ಶ್ರೀಮಂತಿಕೆ ಹೆಚ್ಚುತ್ತದೆ’ ಎಂದು ಅವರು ಹೇಳಿದರು.

ಹಿಂದಿ ಸಂಪರ್ಕ ಭಾಷೆಯಾಗಲಿ:ಅಶ್ವತ್ಥ ನಾರಾಯಣ

‘ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಲಿದೆ. ರಾಷ್ಟ್ರಮಟ್ಟದಲ್ಲಿ ಹಿಂದಿ ಸಂಪರ್ಕ ಭಾಷೆಯಾಗುವ ಅಗತ್ಯವಿದೆ. ನಮ್ಮ ಭಾಷೆಯನ್ನು ಗಟ್ಟಿಗೊಳಿಸಲು ನಾವು ಬೇರೆ ಭಾಷೆಯನ್ನು ದ್ವೇಷಿಸಬೇಕಾಗಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.‘ದೇಶದಲ್ಲಿ ಇಂಗ್ಲಿಷ್‌ಗೆ ವಿಪರೀತ ಒತ್ತುಕೊಡುವ ನಾವು ಭಾರತೀಯ ಭಾಷೆಯಾದ ಹಿಂದಿಯನ್ನು ಬಳಸುವುದರಲ್ಲಿ ತಪ್ಪೇನಿಲ್ಲ’ ಎಂದು ತಿಳಿಸಿದರು

ಸಂವಿಧಾನ ತೀರ್ಮಾನಿಸಲಿ:ಬಿ.ಸಿ.ಪಾಟೀಲ

‘ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎನ್ನುವುದನ್ನು ಸಂವಿಧಾನ ತೀರ್ಮಾನ ಮಾಡಬೇಕು’ ಎಂದು ಚಿತ್ರನಟರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ದಕ್ಷಿಣದ ಸಿನಿಮಾಗಳು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸುತ್ತಿವೆ. ಕಲೆ ಮತ್ತು ಕಲಾವಿದನಿಗೆ ಭಾಷೆಯ ನಿರ್ಬಂಧವಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ದಕ್ಷಿಣ ಭಾರತದ ಸಿನಿಮಾಗಳು ಹಿಂದಿಗೆ ಡಬ್‌ ಆಗಿ ಪ್ರದರ್ಶನಗೊಳ್ಳುತ್ತಿವೆ. ಅದರಲ್ಲಿ ಸ್ವಾರ್ಥ ಬೆರೆಸುವುದು ಸರಿಯಲ್ಲ. ಹಿಂದಿ ಭಾಷೆಯನ್ನು ದೇಶದೆಲ್ಲೆಡೆ ಹೆಚ್ಚಾಗಿ ಬಳಸಲಾಗುತ್ತಿದೆ ಎಂದಿದ್ದಾರೆ.

ಶೇ 48 ಮಂದಿಗೆ ಹಿಂದಿ ಮಾತೃಭಾಷೆ; ಸಿ.ಟಿ.ರವಿ

‘ಭಾರತದ ಶೇ 48ರಷ್ಟು ಜನರಿಗೆ ಹಿಂದಿ ಮಾತೃಭಾಷೆಯಾಗಿದೆ. ಹೀಗಾಗಿ, ಹಿಂದಿ ಸಂಪರ್ಕ ಭಾಷೆಯಾಗಿರಬೇಕು ಎಂದು ಅವರು ಹೇಳಿದ್ದಾರೆ. ಬಾಕಿ ಶೇ 52ರಷ್ಟು ಜನರು ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಬದಲಿಗೆ ಹಿಂದಿ ಬಳಸಬೇಕು ಎಂಬ ಆಶಯ ಇದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

‘ಹಿಂದಿ ಸಂಪರ್ಕ ಭಾಷೆಯಾಗಬೇಕು ಎಂಬ ಗೃಹ ಸಚಿವ ಅಮಿತ್ ಶಾ ಹೇಳಿರುವುದರಲ್ಲಿ ತಪ್ಪೇನಿಲ್ಲ. ಇಂಗ್ಲಿಷ್‌ ಬ್ರಿಟಿಷರ ಹೇರಿಕೆ. ಮಾತೃಭಾಷೆ ಶ್ರೇಷ್ಠವಾದುದು. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲ ಭಾಷೆಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಹೀಗಾಗಿಯೇ, ದೇಶದಲ್ಲಿ ನೂರಾರು ಭಾಷೆಗಳು ಇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.