ಬೆಂಗಳೂರು:ಅನರ್ಹ ಶಾಸಕರ ಬೆಂಬಲಕ್ಕೆ ಕೇಂದ್ರ ಸಚಿವ ಅಮಿತ್ ಶಾ ಇದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾದ ವಿಡಿಯೊ ಬಹಿರಂಗವಾಗಿರುವುದನ್ನು ಉಲ್ಲೇಖಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು ಯಡಿಯೂರಪ್ಪ ಮತ್ತು ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ, ಆಪರೇಷನ್ ಕಮಲಕ್ಕೆ ಸಂಬಂಧಿಸಿ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರದ ನೂರು ದಿನಗಳನ್ನು ಒಂದು ಅದ್ಭುತ ವಿಡಿಯೋ ಪ್ರಸಾರದ ಮೂಲಕ ಆಚರಿಸಿದ್ದಾರೆ. ಈ ಮೂಲಕ ತಾವು ನಡೆಸಿದ್ದ ಆಪರೇಷನ್ ಕಮಲಕ್ಕೆ ಸಾಕ್ಷ್ಯ ಒದಗಿಸಿದ್ದಾರೆ. ರಾಜ್ಯದ ಜನ ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
‘ಶಾಸಕರ ರಾಜೀನಾಮೆಗೂ ಬಿಜೆಪಿಗೂ ಸಂಬಂಧ ಇಲ್ಲ ಎನ್ನುತ್ತಿದ್ದ ಯಡಿಯೂರಪ್ಪ, ಈಗ ಆಪರೇಷನ್ ಕಮಲ ಅಮಿತ್ ಶಾ ನಿರ್ದೇಶನದಲ್ಲಿಯೇ ನಡೆದಿತ್ತು ಎಂಬ ಸತ್ಯವನ್ನು ವೀಡಿಯೋದಲ್ಲಿ ಹೇಳಿದ್ದಾರೆ. ಇಂತಹ ಗೃಹಸಚಿವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇದೆಯೇ?ನಮ್ಮ ಪಕ್ಷದ ಶಾಸಕರಿಗೆ ಆಮಿಷಗಳನ್ನು ಒಡ್ಡಿ ಮುಂಬೈನ ಹೊಟೇಲ್‌ನಲ್ಲಿಟ್ಟು ಸರ್ಕಾರದ ಪತನಕ್ಕೆ ನೇರ ಕಾರಣರಾಗಿರುವ ಅಮಿತ್ ಶಾಆಪರೇಷನ್ ಕಮಲ ಎಂಬ ಅಸಾಂವಿಧಾನಿಕ ಕಾರ್ಯಾಚರಣೆಯ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಆಪರೇಷನ್ ಕಮಲದ ಹೆಸರಿನಲ್ಲಿ ಸಂವಿಧಾನದ ಕಗ್ಗೊಲೆಯಾಗುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ನೇರವಾಗಿ ಈ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಪುರಾವೆ ಸಿಕ್ಕಿದೆ. ಆದ ಕಾರಣ ಇದನ್ನು ಇಲ್ಲಿಗೆ ಕೈಬಿಡುವ ಪ್ರಶ್ನೆಯೇ ಇಲ್ಲ. ಇದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದು ನ್ಯಾಯ ಕೇಳ್ತೇವೆ.ನಮ್ಮ ಪಕ್ಷದ ವತಿಯಿಂದ ರಾಜ್ಯಪಾಲರನ್ನು ಭೇಟಿಮಾಡಿ, ಯಡಿಯೂರಪ್ಪನವರ ರಾಜೀನಾಮೆ ಪಡೆಯುವಂತೆ ಮನವಿ ಪತ್ರ ನೀಡಲಿದ್ದೇವೆ. ರಾಷ್ಟ್ರಪತಿಯವರನ್ನೂ ಭೇಟಿ ಮಾಡಿ, ಆಪರೇಷನ್ ಕಮಲದಲ್ಲಿ ಭಾಗಿಯಾದ ಕೇಂದ್ರ ಸರ್ಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.