ಬೆಂಗಳೂರು: ‘ಬ್ರಿಟಿಷರಿಗೆ ನಾನು ನಿಮ್ಮ ಸೇವಕ ಎಂದಿದ್ದ ಸಾವರ್ಕರ್, ಸ್ವಾತಂತ್ರ್ಯ ಹೋರಾಟಗಾರ ಆಗುವುದು ಹೇಗೆ? ಈ ಕುರಿತು ಬಹಿರಂಗ ಚರ್ಚೆ ನಡೆಯಲಿ. ಆರೆಸ್ಸೆಸ್ಸಿಗೆ ಸಂಪೂರ್ಣ ತಲೆಬಾಗಿದ್ದೇನೆಂದು ಹೇಳುತ್ತಿರುವ ಬೊಮ್ಮಾಯಿಯವರೇ ಚರ್ಚೆಯ ನೇತೃತ್ವ ವಹಿಸಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲುಹಾಕಿದ್ದಾರೆ.
‘ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲ, ಬ್ರಿಟಿಷರಿಗೆ ಗುಲಾಮಗಿರಿ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರರೆಂದು ಇತಿಹಾಸ ತಿರುಚುವ ದುಷ್ಟ ಹುನ್ನಾರವನ್ನು ಬಿಜೆಪಿ ಮುಂದುವರೆಸಿದೆ. ಇಂದಿನ ಬಿಜೆಪಿಯವರು ಒಂದೊ ಮೆದುಳು, ಹೃದಯಗಳನ್ನು ಕಳೆದುಕೊಂಡಿದ್ದಾರೆ.ಅಧಿಕಾರ ಲಾಲಸೆಗಾಗಿ ಬಲಿ ಬಿದ್ದು ಈ ನೆಲದ ಸಕಲ ಪರಂಪರೆಗೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ಆಕ್ರೋಶ
ವ್ಯಕ್ತಪಡಿಸಿದ್ದಾರೆ.
‘ಬಿಜೆಪಿಯವರು ಮೊದಲು ಭಗತ್‍ಸಿಂಗ್‍ರನ್ನು ಆಶ್ರಯಿಸಿದರು. ಆದರೆ, ಭಗತ್‍ಸಿಂಗ್‍ರ ಚಿಂತನೆಗಳು ತಮಗೆ ಡಿಕ್ಕಿ ಹೊಡೆದು ಪುಡಿ ಮಾಡುತ್ತಿವೆ ಎಂದ ಕೂಡಲೇನಿರ್ಲಕ್ಷಿಸಿದರು. ಕೆಲ ಕಾಲ ಸ್ವಾಮಿ ವಿವೇಕಾನಂದರನ್ನು ಗುತ್ತಿಗೆ ತೆಗೆದುಕೊಂಡವರಂತೆ ಓಡಾಡಿದರು.ಆದರೆ, ಸ್ವಾಮಿ ವಿವೇಕಾನಂದರು, ಪುರೋಹಿತಶಾಹಿಗಳ ವಿರುದ್ಧ ಮಾತನಾಡುತ್ತಿದ್ದಂತೆ ಅವರನ್ನೂ ಬಿಟ್ಟುಕೊಟ್ಟರು. ಒಂದಷ್ಟು ಕಾಲ ಸುಭಾಶ್ ಚಂದ್ರ ಬೋಸರನ್ನೂ ಆತುಕೊಂಡು ಬಳಿಕ ಬಿಟ್ಟರು’ ಎಂದಿದ್ದಾರೆ.
‘ನಾಡಿನ ಯುವಜನರು ಎಚ್ಚೆತ್ತುಕೊಳ್ಳದಿದ್ದರೆ ಈ ನೆಲ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ. ಬಿಜೆಪಿಯವರು ದೇಶದ ಸಮಸ್ತವನ್ನೂ ಕಾರ್ಪೊರೇಟ್ ಧಣಿಗಳಿಗೆ ಕೊಟ್ಟು ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಸಂಪೂರ್ಣ ಬರ್ಬಾದು ಮಾಡುತ್ತಿದ್ದಾರೆ. ಯುವಕರು- ಹಿಂದುಳಿದವರು, ದಲಿತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಭ್ರಷ್ಟಾಚಾರ ತುದಿಮುಟ್ಟಿದೆ. ಇವುಗಳನ್ನೆಲ್ಲ ಮರೆಮಾಚಿ ಬಿಜೆಪಿಯವರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದೂ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.