ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಕಲಿ ಟ್ವೀಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸುವಂತೆ ಗೃಹಸಚಿವ ಎಂ.ಬಿ.ಪಾಟೀಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
‘ಭಾರತೀಯ ಯೋಧರು ಇಂದು ಬೆಳಿಗ್ಗೆ ‘ಬಾಗಲಕೋಟೆ’ಯಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ. ಹತರಾದ ಉಗ್ರರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಿದ್ದರಾಮಯ್ಯ ಉಗ್ರರಿಗೆ ಸಂತಾಪ ಸೂಚಿಸಿರುವಂತೆ ಮಂಗಳವಾರ ಸಂಜೆ 5.15ಕ್ಕೆ ಟ್ವೀಟ್ ಮಾಡಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ‘ಅದು ಬಾಗಲಕೋಟೆ ಅಲ್ಲ ಸ್ವಾಮಿ. ಬಾಲಕೋಟ್’ ಎಂದೂ ವ್ಯಂಗ್ಯ ಮಾಡಿದ್ದರು. ನಕಲಿ ಟ್ವೀಟ್‌ನ ಸುದ್ದಿ ತಿಳಿದೊಡನೆ ‘ಇದು ಟ್ರೋಲ್ ಶಿಷ್ಯರ ಕೈವಾಡ’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ಹಾಕಿದ್ದರು.
‘ಈ ಸಂಬಂಧ ದೂರು ಕೊಡುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಫಾರ್ವರ್ಡ್ ಕೂಡ ಅಪರಾಧ: ‘ಹೈಕೋರ್ಟ್ ಆದೇಶದ ಪ್ರಕಾರ ನಕಲಿ ಟ್ವೀಟ್‍ಗಳನ್ನು ಫಾರ್ವರ್ಡ್ ಮಾಡುವುದೂ ಅಪರಾಧ. ಫಾರ್ವರ್ಡ್ ಮಾಡಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ’ ಎಂದು ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.