ADVERTISEMENT

ಹಂ.ಪ.ನಾಗರಾಜಯ್ಯ ವಿಚಾರಣೆ: ಬಿಎಸ್‌ವೈ ವಿರುದ್ಧ ಸಿದ್ದರಾಮಯ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 15:57 IST
Last Updated 22 ಜನವರಿ 2021, 15:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಹಿರಿಯ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರ ಕೃತ್ಯ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರ ಕೃತ್ಯ ಖಂಡನೀಯ. ಈ ಮೂಲಕ ರಾಜ್ಯ ಸರ್ಕಾರ ತಮ್ಮದು ‘ದುರ್ಯೋಧನ’ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರದ ಗೋಮುಖವ್ಯಾಘ್ರ ಮುಖ ಬಯಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಹಂಪನಾ ವಿಚಾರಣೆ: ಎಸ್ಪಿ ವಿಷಾದ
ಮಂಡ್ಯ
: ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಪೊಲೀಸ್‌ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಶುಕ್ರವಾರ ವಿಷಾದ ವ್ಯಕ್ತಪಡಿಸಿದ್ದಾರೆ.

ಹಂ.ಪ.ನಾಗರಾಜಯ್ಯ ಅವರು ಖ್ಯಾತ ಸಾಹಿತಿ ಹಾಗೂ ಹಿರಿಯ ನಾಗರಿಕರು. ಅವರು ಪೊಲೀಸ್‌ ಠಾಣೆಗೆ ಬಂದು ಹೇಳಿಕೆ ನೀಡುವ ಸನ್ನಿವೇಶ ಉದ್ಬವಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸಲಾಗಿದೆ. ಘಟನೆ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸಲು ಡಿವೈಎಸ್‌ಪಿಗೆ ಸೂಚಿಸಲಾಗಿದೆ. ವರದಿ ಆಧರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಹಂ.ಪ.ನಾಗರಾಜಯ್ಯ ಅವರು ಪ್ರಧಾನಮಂತ್ರಿ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿ ಜನತೆಗೆ ತಪ್ಪು ಸಂದೇಶ ನೀಡಿದ್ದಾರೆ ಎಂದು ಆರೋಪಿಸಿ ಜ.19ರಂದು ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜ.20ರಂದು ಠಾಣೆಯ ಸಿಬ್ಬಂದಿ ಹಂ.ಪ.ನಾಗರಾಜಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ದೂರಿನ ವಿವರ ತಿಳಿಸಿದ್ದರು. ಜ.21ರಂದು ಅವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಮ್ಮೇಳನ ಉದ್ಘಾಟನಾ ಭಾಷಣದಲ್ಲಿ ರೈತರ ಹೋರಾಟ ಪ್ರಸ್ತಾಪಿಸಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ವಿರುದ್ಧ ಎತ್ತಿಕಟ್ಟುವ ಹಾಗೂ ಪ್ರಚೋದನಾಕಾರಿಯಾಗಿ ಮಾತನಾಡಿಲ್ಲ. ತಮಗೆ ಪ್ರಧಾನಮಂತ್ರಿಗಳ ಬಗ್ಗೆ ಅಪಾರ ಗೌರವ ಇದೆ. ಅವರು ನಮ್ಮ ಹೆಮ್ಮೆಯ ರಾಷ್ಟ್ರನಾಯಕರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಎಸ್‌ಪಿ ಪರಶುರಾಂ ತಿಳಿಸಿದ್ದಾರೆ.

‘ಪೊಲೀಸ್‌ ಠಾಣೆಗೆ ತೆರಳಿ ನಾನು ಯಾವುದೇ ಪತ್ರ ಬರೆದುಕೊಟ್ಟಿಲ್ಲ, ಕ್ಷಮೆ ಕೇಳಿಲ್ಲ, ವಿಷಾದ ವ್ಯಕ್ತಪಡಿಸಿಲ್ಲ. ಪ್ರಧಾನಮಂತ್ರಿ ಬಗ್ಗೆ ನನಗೆ ಗೌರವವಿದೆ. ಭಾಷಣದಲ್ಲಿ ರೈತರ ಹೋರಾಟವನ್ನು ವಿಶ್ಲೇಷಣೆ ಮಾಡಿದ್ದೇನೆ ಎಂದಷ್ಟೇ ಪೊಲೀಸರಿಗೆ ತಿಳಿಸಿದ್ದೇನೆ’ ಎಂದು ಹಂ.ಪ.ನಾಗರಾಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತನಿಖೆಗೆ ಆದೇಶಿಸಿರುವ ಪ್ರತಿ

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.