‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ತೆರವಾಗುವ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ದಲಿತ ನಾಯಕನನ್ನು ಆಯ್ಕೆ ಮಾಡಲಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರಿಗೆ ಸವಾಲು ಹಾಕಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಅವರ ಬದಲಾವಣೆ ಆಗುತ್ತದೆ ಎಂದು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ. ಈಗ ಅದು ಖಚಿತವಾಗುತ್ತಿದೆ. ಆದರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ನನಗೆ ಗೊತ್ತಿಲ್ಲ’ ಎಂದರು.
‘ಯಾವುದೇ ಮಠಾಧೀಶರು ರಾಜ ಕೀಯದ ಬಗ್ಗೆ ಅಭಿಪ್ರಾಯ ಹೇಳಲಿ. ಆದರೆ ನೇರ ರಾಜಕಾರಣಕ್ಕೆ ಕೈ ಹಾಕ ಬಾರದು. ಜನರ ಅಭಿಪ್ರಾಯಕ್ಕೆ ಮಠಾ ಧೀಶರು ಮನ್ನಣೆ ನೀಡಲಿ’ ಎಂದರು.
ಪೆಗಾಸಸ್ ಗೂಢಚರ್ಯೆ ಕುರಿತು ಪ್ರತಿಕ್ರಿಯಿಸಿಸಿ, ‘ಫೋನ್ ಕದ್ದಾಲಿಕೆ ಇದೇ ಮೊದಲಲ್ಲ. 2019ರಲ್ಲಿ ನನ್ನ ಪಿಎ ವೆಂಕಟೇಶ್ ಫೋನ್ ಕದ್ದಾಲಿಸಲಾಗಿದೆ. ಕುಮಾರಸ್ವಾಮಿ, ಡಾ.ಜಿ. ಪರಮೇಶ್ವರ್ ಸೇರಿ ಹಲವರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸ ಬೇಕು’ ಎಂದು ಅವರು ಒತ್ತಾಯಿಸಿದರು.
ಎಷ್ಟು ದಲಿತರನ್ನು ಸಿಎಂ ಮಾಡಿದ್ದೀರಿ?
ಚಿತ್ರದುರ್ಗ: ‘ಸ್ವಾತಂತ್ರ್ಯ ಸಿಕ್ಕ ಬಳಿಕ ಹಲವು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಎಷ್ಟು ಮಂದಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಲಿತರನ್ನು ಮುಖ್ಯಮಂತ್ರಿ ಮಾಡಲಿ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು.
‘ರಾಜ್ಯದ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ಗೆ ಈವರೆಗೆ ಸಾಧ್ಯವಾಗಿಲ್ಲ. ದಲಿತ ಸಮುದಾಯವನ್ನು ತುಳಿದಿದ್ದೇವೆ ಎಂಬುದನ್ನು ಕಾಂಗ್ರೆಸ್ ಒಪ್ಪಿಕೊಳ್ಳಬೇಕು. ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಅವರು ಬಿಜೆಪಿಗೆ ಸವಾಲು ಹಾಕುವ ನೈತಿಕತೆ ಉಳಿಸಿಕೊಂಡಿಲ್ಲ’ ಎಂದು ಕಿಡಿಕಾರಿದರು.
‘ಸಾಮಾಜಿಕ ನ್ಯಾಯದ ಸೂತ್ರದಡಿ ಧರ್ಮಸಿಂಗ್ ಅವರನ್ನು ಸಿ.ಎಂ ಮಾಡಿದರೂ ಉದ್ಧಾರ ಆಗಲು ಬಿಡಲಿಲ್ಲ. ಡಾ.ಜಿ.ಪರಮೇಶ್ವರ ಅವರನ್ನು ಸಿದ್ದರಾಮಯ್ಯ ಅವರೇ ಸೋಲಿಸಿದರು. ಮತ್ತೆ ಸಿ.ಎಂ ಆಗುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡುವುದಿಲ್ಲ’ ಎಂದು ಹೇಳಿದರು.
‘ರಾಷ್ಟ್ರಭಕ್ತಿ ಇರುವವರಿಗೆ ಬಿಜೆಪಿ ಹುದ್ದೆ ನೀಡುತ್ತದೇ ಹೊರತು ಜಾತಿ ಹುಡುಕುವುದಿಲ್ಲ. ದಲಿತ ಸಮುದಾಯದ ನಾಯಕರನ್ನು ರಾಷ್ಟ್ರಪತಿ ಮಾಡಿದ್ದೇವೆ. ಹಲವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ರಾಜ್ಯದ ರಾಜ್ಯಪಾಲರು ಕೂಡ ದಲಿತ ನಾಯಕ’ ಎಂದು ತಿರುಗೇಟು ನೀಡಿದರು.
ಅವನ್ಯಾರು ಹೇಳುವುದಕ್ಕೆ? ಶ್ರೀನಿವಾಸಪ್ರಸಾದ್ ಪ್ರಶ್ನೆ
ಚಾಮರಾಜನಗರ: ಬಿಜೆಪಿ ದಲಿತರನ್ನು ಸಿಎಂ ಮಾಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್, ‘ಅವನ್ಯಾರು ಹೇಳುವುದಕ್ಕೆ’ ಎಂದುಸಂಸದ ವಿ.ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ವಿರೋಧ ಪಕ್ಷದಲ್ಲಿರುವವರು ಈ ರೀತಿ ಹೇಳಿಕೆ ಕೊಡುವುದೇ? ಅವರು ಸಿ.ಎಂ ಆಗಿದ್ದಾಗ ಮುಂದಿನ ಬಾರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇನೆ’ ಎನ್ನುತ್ತಿದ್ದರು. ಆಮೇಲೆ ಮಾತು ಬದಲಿಸಿ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಅಂಬಾರಿ ಮೇಲೆ ಕುಳಿತುಕೊಂಡು ಬಂದರು’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.