ಬೆಂಗಳೂರು: ಖಾಸಗಿ ಸಂಸ್ಥೆಯೊಂದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಯ ಅನುಮತಿ ನೀಡಿರುವುದು ಕಾಂಗ್ರೆಸ್ –ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ.
‘ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್‌ನ ಸೇಡಿನ ಕತೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ - ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
'ಆಪರೇಷನ್ ವೋಟರ್ ಹಗರಣವನ್ನು ಹಾಸ್ಯಾಸ್ಪದ ಎಂದು ತಳ್ಳಿಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಹಗರಣದ ರೂವಾರಿಗಳನ್ನು ರಕ್ಷಿಸಲು, ಸಂಸ್ಥೆಯ ಒಬ್ಬ ಏಜೆಂಟನ ವಿರುದ್ಧ ಪೊಲೀಸರಿಂದ ಎಫ್ಐಆರ್ ಹಾಕಿಸಿ ತಮ್ಮ ಸರ್ಕಾರದ ಕೆಲಸ ಎಷ್ಟು ಹಾಸ್ಯಾಸ್ಪದ ಎನ್ನುವುದನ್ನು ಸಾಬೀತುಪಡಿಸಿದ್ದಾರೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
‘ಮತದಾರರ ಪಟ್ಟಿ ಪರಿಷ್ಕರಣೆಯ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿರುದ್ಧವೇ ನಾವು ದೂರು ನೀಡಿದ್ದೆವು. ಮುಖ್ಯಮಂತ್ರಿಗಳು ₹20,000 ಸಂಬಳದ ಬಡಪಾಯಿ ಏಜೆಂಟನನ್ನು ಬಲಿಪಶು ಮಾಡಿ ತಾವು ಪಾರಾಗುವ ಸಂಚು ನಡೆಸಿದ್ದಾರೆ’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೊಮ್ಮಾಯಿ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಆಪರೇಷನ್ ವೋಟರ್ ಹಗರಣವನ್ನು ಜಾತಿ ಗಣತಿಗೆ ಹೋಲಿಸಿದ್ದಾರೆ. ಒಂದು ಸಂಸ್ಥೆಯ ಹಿನ್ನೆಲೆಯನ್ನೂ ಪರಿಶೀಲಿಸದೆ ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿರುವ ಅನುಮತಿಗೂ, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿಗೂ ಏನು ಸ್ವಾಮಿ ಸಂಬಂಧ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
‘ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿರುವ ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅದರ ಮಾಲೀಕರು ಯಾರು? ಸಂಸ್ಥೆಯ ಹಣಕಾಸು ಸಾಮರ್ಥ್ಯ ಏನು? ಉದ್ಯೋಗಿಗಳ ಸಂಖ್ಯೆ ಎಷ್ಟು? ಅದರ ಹಣಕಾಸಿನ ಮೂಲ ಯಾವುದು? ಈ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆಯಾಗಲಿ’ ಎಂದು ಅವರು ಆಗ್ರಹಿಸಿದ್ದಾರೆ.
‘ದೂರು ಬಂದ ಕಾರಣಕ್ಕೆ ಚಿಲುಮೆಗೆ ನೀಡಿರುವ ಅನುಮತಿಯನ್ನು ಬಿಬಿಎಂಪಿ ರದ್ದುಪಡಿಸಿರುವುದನ್ನು ಸ್ವಾಗತಿಸುತ್ತೇನೆ. ಮಾಡಿರುವ ಅಪರಾಧಕ್ಕೆ ಅನುಮತಿ ರದ್ದತಿ ಶಿಕ್ಷೆ ಅಲ್ಲವಲ್ಲಾ? ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆಯೇ ಒಪ್ಪಿಕೊಂಡಂತಾಗಿಲ್ಲವೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದಾಗಲೇ ಅದರ ಹಿಂದಿನ ದುರುದ್ದೇಶದ ಅರಿವು ಬಿಬಿಎಂಪಿಗೆ ಆಗಬೇಕಿತ್ತು. ಆಗಿಲ್ಲ ಎಂದರೆ ಬಿಬಿಎಂಪಿ ಹಗರಣದದಲ್ಲಿ ಭಾಗಿಯಾಗಿದೆ ಎಂದು ಅರ್ಥ ಅಲ್ಲವೇ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಚಿಲುಮೆ ಸಂಸ್ಥೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಿದ್ದೀರಿ ಸರಿ, ಆದರೆ ಆ ಸಂಸ್ಥೆ ಅಕ್ರಮವಾಗಿ ಸಂಗ್ರಹಿಸಿರುವ ಮಾಹಿತಿ ಏನಾಯಿತು? ಆ ಸಂಸ್ಥೆ ಬಿಬಿಎಂಪಿಗೆ ಸಲ್ಲಿಸಿದೆಯಾ? ಇಲ್ಲವೇ ಯಾವುದಾದರೂ ರಾಜಕೀಯ ಪಕ್ಷಕ್ಕೆ ಮಾರಿದೆಯಾ? ಎಂದು ಸಿದ್ದರಾಮಯ್ಯ ಸಂಶಯ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.