ADVERTISEMENT

ತಿರುಕನ ಕನಸು ಕಾಣುತ್ತಿರುವ ಸಿದ್ದರಾಮಯ್ಯ: ಯಡಿಯೂರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:20 IST
Last Updated 1 ಡಿಸೆಂಬರ್ 2019, 11:20 IST
   

ಬೆಳಗಾವಿ: ‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸರ್ಕಾರ ಬರುತ್ತದೆಂದು ತಿರುಕನ ಕನಸು ಕಾಣುತ್ತಿದ್ದಾರೆ. ಆರು ತಿಂಗಳಲ್ಲಿ ನಮ್ಮ ಸರ್ಕಾರ ಬಿದ್ದು ಹೋಗಿ, ಚುನಾವಣೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.

ಗೋಕಾಕ ತಾಲ್ಲೂಕು ಅಂಕಲಗಿ ಹೆಲಿಪ್ಯಾಡ್‌ನಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಡಿ.9ರ ನಂತರ ರಾಜಕೀಯ ಧ್ರುವೀಕರಣ ನೂರಕ್ಕೆ ನೂರರಷ್ಟು ಆಗುವುದು ನಿಜ. ಕಾಂಗ್ರೆಸ್ ನೆಲ ಕಚ್ಚುತ್ತದೆ. ನಾವು ಅಧಿಕಾರ ಪೂರ್ಣಗೊಳಿಸುತ್ತೇವೆ. ಇದೇ ರಾಜಕೀಯ ಧ್ರುವೀಕರಣ’ ಎಂದರು.

ADVERTISEMENT

‘15 ಕ್ಷೇತ್ರಗಳಲ್ಲೂ ನಮ್ಮ ನಿರೀಕ್ಷೆ ಮೀರಿ ಉತ್ತಮ ವಾತಾವರಣ ಇದೆ. ಗೋಕಾಕದ ರಮೇಶ ಜಾರಕಿಹೊಳಿ ಮಂತ್ರಿಯಾಗಿ ಇರುವುದಿದ್ದರೆ ಅಲ್ಲೇ ಇರಬಹುದಿತ್ತು. ಆದರೆ, ಪಕ್ಷಕ್ಕಾಗಿ ತ್ಯಾಗ ಮಾಡಿ ಬಂದಿದ್ದಾರೆ. ನಾನು ಮುಖ್ಯಮಂತ್ರಿಯಾಗಲು ಅವರು ಕಾರಣವಾಗಿದ್ದಾರೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ’ ಎಂದರು.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೊಡುತ್ತಿರುವ ವಿದ್ಯಾರ್ಥಿವೇತನವನ್ನು 2019-20ನೇ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿತ್ತು. ಇದರಿಂದಾಗಿ ಅವರು ಆತಂಕಕ್ಕೆ ಒಳಗಾಗುವ ಅಥವಾ ಪ್ರತಿಭಟನೆ ನಡೆಸುವ ಅಗತ್ಯವಿಲ್ಲ. ಅವರಿಗೂ ವಿದ್ಯಾರ್ಥಿವೇತನ ಕೊಡುವಂತೆ ಆದೇಶ ಮಾಡಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.