ADVERTISEMENT

ದ್ವೇಷದ ರಾಜಕಾರಣದಿಂದ ಕೊಲೆ: ಆರು ಯುವಕರ ಕುಟುಂಬಗಳಿಗೆ ತಲಾ ₹ 25 ಲಕ್ಷ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 7:24 IST
Last Updated 19 ಜೂನ್ 2023, 7:24 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರದ ಚೆಕ್ ಅನ್ನು ವಿತರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರದ ಚೆಕ್ ಅನ್ನು ವಿತರಿಸಿದರು.   

ಬೆಂಗಳೂರು: ಮತೀಯ ಹಾಗೂ ದ್ವೇಷದ ರಾಜಕಾರಣದಿಂದಾಗಿ ಕೊಲೆಗೀಡಾಗಿದ್ದ ಆರು ಯುವಕರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ₹ 25 ಲಕ್ಷ‌ ಮೊತ್ತದ ಪರಿಹಾರದ ಚೆಕ್ ಅನ್ನು ಸೋಮವಾರ ವಿತರಿಸಿದರು.

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕಳಂಜ ಗ್ರಾಮದ ಮಸೂದ್, ಮಂಡ್ಯದ ಇದ್ರಿಸ್ ಪಾಷ, ಮಂಗಳೂರಿನ ಹೊರ ವಲಯದ ಬಾಳ ಗ್ರಾಮದ ಮೊಹಮದ್ ಫಾಜಿಲ್, ನರಗುಂದದ ಶಮೀರ್, ಮಂಗಳೂರಿನ ಕಾಟಿಪಳ್ಳದ ಅಬ್ದುಲ್ ಜಲೀಲ್ ಮತ್ತು ದೀಪಕ್ ರಾವ್ ಅವರ ಕುಟುಂಬದವರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ ₹ 25 ಲಕ್ಷ ಪರಿಹಾರ ವಿತರಿಸಲಾಯಿತು. ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಯುವಕರ ಕುಟುಂಬಗಳ ಸದಸ್ಯರು ಚೆಕ್ ಸ್ವೀಕರಿಸಿದರು. ಸಚಿವರಾದ ಬಿ.ಜೆಡ್. ಜಮೀರ್ ಅಹಮದ್ ಖಾನ್, ಎನ್. ಚಲುವರಾಯಸ್ವಾಮಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಅಬ್ದುಲ್ ನಜೀರ್ ಇದ್ದರು.

ಕೋಮು ಗಲಭೆಗಳಲ್ಲಿ ಮೃತಪಟ್ಟ ಹಿಂದೂಗಳ ಕುಟುಂಬದವರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಲಾ ₹25 ಲಕ್ಷ‌ ಪರಿಹಾರ ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ ಎಂಬ ಯುವಕರ ಕುಟುಂಬಗಳಿಗೆ ಈ ರೀತಿ ಪರಿಹಾರ ನೀಡಲಾಗಿತ್ತು. ಆದರೆ, ಮೃತರಾದ ಮುಸ್ಲಿಮರ ಕುಟುಂಬಗಳಿಗೆ ಪರಿಹಾರ ನೀಡಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಜನರ‌ ಮಧ್ಯೆ ತಾರತಮ್ಯ ಮಾಡಬಾರದು. ಈ ಕಾರಣದಿಂದ ಆರು ಮಂದಿಯ ಕುಟುಂಬಗಳಿಗೆ ಈಗ‌ ಪರಿಹಾರ ವಿತರಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.