ADVERTISEMENT

ಸಿದ್ದರಾಮಯ್ಯ, ಡಿಕೆ‌ಶಿ ಜಾತಿ ಪ್ರೇಮ ಉಳಿದವರಿಗೆ ಮಾದರಿಯಾಗಲಿ: ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 6:26 IST
Last Updated 1 ಜೂನ್ 2023, 6:26 IST
   

ಕಾರವಾರ: 'ಸಿದ್ದರಾಮಯ್ಯ ಹಿಂದೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುರುಬ ಸಮುದಾಯಕ್ಕೆ ಸುಮಾರು ಹತ್ತು ಸಾವಿರ ಕೋಟಿ ಅನುದಾನ ನೀಡಿದ್ದರು. ಡಿ.ಕೆ‌.ಶಿವಕುಮಾರ್ ಕೂಡ ಒಕ್ಕಲಿಗರಿಗೆ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಜಾತಿಪ್ರೇಮ ಈಡಿಗ ನಾಯಕರಿಗೂ ಅರಿವಾಗಬೇಕು' ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾಲ್ಕು ದಶಕಗಳಿಂದ ಕಾಂಗ್ರೆಸ್ ನಲ್ಲಿ ನಿಷ್ಠೆಯಿಂದ ದುಡಿಯುತ್ತಿರುವ ಬಿ.ಕೆ.ಹರಿಪ್ರಸಾದ ಅವರಿಗೆ ಸಚಿವ ಸ್ಥಾನ ತಪ್ಪಿಸಿರುವುದು ದುರಂತ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಅಹಿಂದ ವರ್ಗದಲ್ಲಿ ಕೇವಲ ಕುರುಬರು, ಒಕ್ಕಲಿಗರು ಇಲ್ಲ. ಈಡಿಗ ಸೇರಿದಂತೆ ಹಲವು ಸಮುದಾಯಗಳಿವೆ. ಅವರಿಗೂ ನಿರೀಕ್ಷಿತ ಪ್ರಾತಿನಿಧ್ಯ ಸಿಗಬೇಕಿದೆ. ಹೀಗಾಗಿ ಈಡಿಗ ಸಮುದಾಯ ಸೇರಿದಂತೆ ಉಳಿದ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು' ಎಂದರು.

ADVERTISEMENT

'ಈಡಿಗ, ನಾಮಧಾರಿ, ಬಿಲ್ಲವ ಸಮುದಾಯದವರಲ್ಲಿ ರಾಜಕೀಯ, ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೂನ್ 3 ಮತ್ತು 4 ರಂದು ಕುಮಟಾದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಸಮುದಾಯದ ಪ್ರಮುಖರನ್ನು ಸೇರಿಸಿ ವಿಶೇಷ ಚಿಂತನ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಚರ್ಚಿಸಲಾಗುವುದು' ಎಂದರು.

'ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಪೀಠಕ್ಕೆ ₹500 ಕೋಟಿ ಅನುದಾನ ಒದಗಿಸಬೇಕು. ಪೀಠಕ್ಕೆ ಅಧ್ಯಕ್ಷ, ಸದಸ್ಯರ ನೇಮಕವಾಗಬೇಕು. ಉತ್ತರ ಕನ್ನಡದಲ್ಲಿ ಯು.ಪಿ.ಎಸ್.ಸಿ ತರಬೇತಿ ಕೇಂದ್ರ ತೆರೆಯಬೇಕು' ಎಂಬ ಬೇಡಿಕರಯನ್ನೂ ಮುಂದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.