ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹಮದ್ ಖಾನ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಐಷಾರಾಮಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಿರುವ ವಿಷಯ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ಸಿದ್ದರಾಮಯ್ಯ ನೇತೃತ್ವದ ನಿಯೋಗ ದೆಹಲಿಗೆ ತೆರಳಿತ್ತು. ಈ ವೇಳೆ, ವಸತಿ ಸಚಿವ ಜಮೀರ್ ಅಹಮದ್ ಕೂಡ ವಸತಿ, ಅಲ್ಪಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ಬೇಡಿಕೆ ಹೊತ್ತು ಕೇಂದ್ರ ಸಚಿವರ ಭೇಟಿಗಾಗಿ ದೆಹಲಿಗೆ ಹೋಗಿದ್ದರು. ಸಿದ್ದರಾಮಯ್ಯನವರ ಜತೆಯಲ್ಲಿ ಅವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು ಮತ್ತು ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಇದ್ದರು.
ಐಷಾರಾಮಿ ವಿಮಾನದಲ್ಲಿ ಓಡಾಡಿದ, ಕುಳಿತ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಅದನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದ ಜಮೀರ್ ಅಹಮದ್, ‘ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣ’ ಎಂದು ಬರೆದುಕೊಂಡಿದ್ದರು. ಜಮೀರ್ ಅವರು ಸಿನಿಮಾ ಹೀರೊ ಮಾದರಿಯಲ್ಲಿ ಓಡಾಡುವ ದೃಶ್ಯವೂ ವಿಡಿಯೊದಲ್ಲಿದೆ.
ಈ ವಿಡಿಯೊವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ‘ಸಮಾಜವಾದಿಯಲ್ಲ ಮಜವಾದಿ’ ಎಂದು ಹರಿಹಾಯ್ದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಂದು ಗುಂಪು ಅಥವಾ ಕೆಲವೇ ವ್ಯಕ್ತಿಗಳು ಸೇರಿ ಪ್ರತ್ಯೇಕವಾಗಿ ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕಾಗಿ ಗೊತ್ತು ಮಾಡುವ ವಿಮಾನಕ್ಕೆ ವಿಶೇಷ ಅಥವಾ ಚಾರ್ಟರ್ಡ್ ಜೆಟ್ ಎನ್ನಲಾಗುತ್ತದೆ. ಇದು ಎಲ್ಲ ರೀತಿಯಿಂದಲೂ ಐಷಾರಾಮಿ ಮತ್ತು ಆರಾಮದಾಯಕವಾಗಿರುತ್ತದೆ. ಖಾಸಗಿತನಕ್ಕೆ ಅವಕಾಶವಿರುತ್ತದೆ.
ಆರು ಆಸನಗಳಿಂದ ಹಿಡಿದು 180 ಆಸನಗಳವರೆಗಿನ ಚಾರ್ಟಡ್ ಫ್ಲೈಟ್‌ಗಳಿರುತ್ತವೆ. ಈ ವಿಮಾನಗಳಲ್ಲಿ ಸೋಫಾ ಮಾದರಿಯ ಆಸನಗಳಿರುತ್ತವೆ. ಆಸನಗಳ ಮಧ್ಯದ ಜಾಗ ವಿಶಾಲವಾಗಿದ್ದು, ಊಟ, ಉಪಾಹಾರಕ್ಕಾಗಿ ಮೇಜುಗಳು, ಆಲಂಕಾರಿಕ ವಸ್ತುಗಳು ಇರುತ್ತವೆ.
ಹಲವು ವಿಮಾನಗಳ ಕಂಪನಿಗಳು ಮತ್ತು ವ್ಯಕ್ತಿಗಳು ಚಾರ್ಟರ್ಡ್ ವಿಮಾನ ಸೇವೆಗಳನ್ನು ನೀಡುತ್ತಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಯವರಿಗೆ ಈ ರೀತಿಯ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶವಿದೆ.
ಹಿಂದೆ ಮುಖ್ಯಮಂತ್ರಿಗಳಾಗಿದ್ದವರು ವಿಶೇಷ ಸಂದರ್ಭಗಳ ಪ್ರಯಾಣಕ್ಕಾಗಿ ಚಾರ್ಟರ್ಡ್ ವಿಮಾನಗಳನ್ನು ಬಳಸಿದ್ದಾರೆ.
‘ಯಾರದ್ದೋ ದುಡ್ಡು ಆಕಾಶದಲ್ಲಿ ಜಾತ್ರೆ’: ‘ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಬರಗಾಲದಿಂದ ಬೇಯುತ್ತಿದೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತಮ್ಮ ಜೀವನ ಶೈಲಿ ಎಂದು ಪ್ರದರ್ಶಿಸಿಕೊಳ್ಳುತ್ತಿರುವ ಸಚಿವ ಜಮೀರ್ ಅಹಮದ್ ಖಾನ್ ಜತೆ ಜನರ ತೆರಿಗೆ ಹಣ ವ್ಯಯಿಸಿ ಐಷಾರಾಮಿ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಜಿನ ಭಾಗವಾಗಿರುವುದು ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತಿನ್ನೇನೂ ಅಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
‘ಮುಖ್ಯಮಂತ್ರಿ ಮತ್ತವರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನಗಳನ್ನು ನೋಡಿದರೆ ‘ರೋಮ್ ದೊರೆ ನೀರೋ’ ಬಗೆಗಿನ ಮಾತನ್ನು ‘ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ ‘ದೊರೆ ಆಕಾಶದಲ್ಲಿ ಓಲಾಡುತ್ತಾ ತೇಲುತ್ತಿದ್ದಾರೆ’ ಎಂದು ಹೇಳಬಹುದು’ ಎಂದು ‘ಎಕ್ಸ್’ನಲ್ಲಿ ವಿಜಯೇಂದ್ರ ಟೀಕಿಸಿದ್ದಾರೆ.
ಪ್ರಲ್ಹಾದ ಜೋಶಿ ‘ಬೆಂಗಳೂರು–ದೆಹಲಿ–ಬೆಂಗಳೂರು ಮಧ್ಯ ಸಾಕಷ್ಟು ವಿಮಾನ ಸೇವೆಯಿದೆ. ಬರದಿಂದ ಇಡೀ ರಾಜ್ಯ ತತ್ತರಿಸಿದೆ. ರೈತರಿಗೆ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದೇ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರವಾಸ ಮಾಡುತ್ತಿರುವುದು ಜನರಿಗೆ ಮಾಡುತ್ತಿರುವ ಅಪಮಾನ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ದೂರಿದ್ದಾರೆ.
ರಾಜ್ಯ ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಳಗ ಶ್ರೀಮಂತಿಕೆಯ ದೌಲತ್ತು ಪ್ರದರ್ಶಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 7 ತಿಂಗಳಿಂದ 350ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಬೆಳೆ ನಾಶವಾಗಿದೆ. ಇಂತಹ ಭೀಕರ ಬರದಲ್ಲೂ ವೆಚ್ಚಕ್ಕೆ ಕಡಿವಾಣ ಹಾಕಿ ಮೇಲ್ಪಂಕ್ತಿ ಹಾಕಬೇಕಾಗಿದ್ದ ಮುಖ್ಯಮಂತ್ರಿ ವಿಶೇಷ ವಿಮಾನದಲ್ಲಿ ಹಾರಾಟ ಮಾಡಿ ಮೋಜು– ಮಜಾ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ‘ಆಪರೇಷನ್ ಕಮಲ’ದ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಿ ಶಾಸಕರನ್ನು ವಿಶೇಷ ವಿಮಾನದಲ್ಲಿ ದೆಹಲಿ ಮುಂಬೈ ಸುತ್ತಾಡಿಸಿ ಐಷಾರಾಮಿ ಹೋಟೆಲ್‌ಗಳಲ್ಲಿ ವಾರಗಟ್ಟಲೆ ಠಿಕಾಣಿ ಹಾಕಿಸಿ ಮೋಜು–ಮಸ್ತಿಗಾಗಿ ನೂರಾರು ಕೋಟಿ ಖರ್ಚು ಮಾಡಿದ್ದು ಬಡ ಜನರು ಕಷ್ಟಪಟ್ಟು ಕಟ್ಟಿದ ತೆರಿಗೆ ಹಣವಲ್ಲವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಮಾನ ಯಾನದ ಕುರಿತು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ಅವರು ‘ಶಾಸಕರನ್ನು ಸುತ್ತಾಡಿಸಲು ಖರ್ಚು ಮಾಡಿದ ನೂರಾರು ಕೋಟಿ ಹಣ ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಕೂಲಿ ಮಾಡಿ ಕೂಡಿಟ್ಟಿದ್ದಲ್ಲ’ ಎಂದು ಹಂಗಿಸಿದ್ದಾರೆ.
‘ರಾಜ್ಯದ ಬರ ಪರಿಸ್ಥಿತಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚಿಸುವ ಸಲುವಾಗಿ ವಿಶೇಷ ವಿಮಾನದಲ್ಲಿ ನಾನು ಪ್ರಯಾಣ ಬೆಳೆಸಿದ್ದನ್ನು ವಿರೋಧಿಸುವ ನೈತಿಕತೆ ಬಿಜೆಪಿ ನಾಯಕರಿಗೆ ಇದೆಯೇ? ಪ್ರಧಾನಿ ನರೇಂದ್ರ ಮೋದಿ 2014ರ ಜೂನ್ 15ರಿಂದ 2023ರ ಸೆಪ್ಟೆಂಬರ್‌ವರೆಗೆ 74 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಪ್ರತಿ ಪ್ರವಾಸದ ಸರಾಸರಿ ವೆಚ್ಚ ₹8.9 ಕೋಟಿ. ದೇಶ ಹಸಿವಿನ ಸೂಚ್ಯಂಕದಲ್ಲಿ 111 ಸ್ಥಾನದಲ್ಲಿದೆ. ದೇಶದ ಜನ ಹಸಿವಿನಿಂದ ಬಳಲುತ್ತಿರುವ ವೇಳೆ ಪ್ರಧಾನಿಯವರು ವಿಶೇಷ ವಿಮಾನದ ಮೂಲಕ ವಿದೇಶ ಯಾತ್ರೆ ಮಾಡಿಕೊಂಡು ಮೋಜು ಮಾಡುತ್ತಿದ್ದಾರೆ ಎಂದು ಹೇಳಲು ಆಗುತ್ತದೆಯೇ’ ಎಂದೂ ಅವರು ಪ್ರಶ್ನಿಸಿದ್ದಾರೆ.
ಬರದಿಂದ ರಾಜ್ಯ ತತ್ತರಿಸಿದೆ. ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರವಾಸ ಮಾಡುತ್ತಿರುವುದು ಜನರಿಗೆ ಮಾಡುತ್ತಿರುವ ಅಪಮಾನ.- ಪ್ರಲ್ಹಾದ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ರಾಜ್ಯ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಳಗ ಶ್ರೀಮಂತಿಕೆಯ ದೌಲತ್ತು ಪ್ರದರ್ಶಿಸಿದೆ.- ಆರ್.ಅಶೋಕ, ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.