ಬೆಂಗಳೂರು: ‘ಕಾಂಗ್ರೆಸ್ ಸರ್ಕಾರದ ನೂರು ದಿನಗಳ ಸಾಧನೆ ಎಂದರೆ ವಿಧಾನಸೌಧದ ಮೂಲೆ– ಮೂಲೆಯಲ್ಲೂ ಭ್ರಷ್ಟಾಚಾರದ ತಾಂಡವ, ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿಕೊಂಡು ಕಮಿಷನ್ ದಂಧೆ ಆರಂಭಿಸಿರುವುದು ಮತ್ತು ಸರ್ವಾಧಿಕಾರಿ ಆಡಳಿತ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವ್ಯಾಖ್ಯಾನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ‘ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ನೂರು ದಿನಗಳಲ್ಲಿ ಎಡವಿದ್ದೇ ಹೆಚ್ಚು. ಗ್ಯಾರಂಟಿ ನೆಪದಲ್ಲಿ ಒಂದು ವರ್ಷದ ಅಭಿವೃದ್ಧಿಯ ಎಲ್ಲ ಕಾಮಗಾರಿಗಳನ್ನೂ ನಿಲ್ಲಿಸಿದ್ದಾರೆ. ವರ್ಗಾವಣೆಯನ್ನು ಕಮಿಷನ್ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ’ ಎಂದರು.
‘ರೈತರು ಬರಗಾಲದ ಬವಣೆಯಲ್ಲಿ ಸಿಲುಕಿದ್ದರೂ ಕೂಡ ಸರ್ಕಾರ ಆ ಕಡೆ ತಿರುಗಿ ನೋಡಿಲ್ಲ. ರೈತರ ಆತ್ಮಹತ್ಯೆ ಮತ್ತೆ ಆರಂಭವಾಗಿದೆ. ಕೃಷಿ ಉತ್ಪಾದನೆಗೆ ಪಟ್ಟು ಬೀಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಪೂರ್ಣ ಪ್ರಮಾಣದ ಗ್ಯಾರಂಟಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹರಿಹಾಯ್ದಿದ್ದಾರೆ’ ಎಂದು ಹೇಳಿದರು.
‘ಒಂದು ಕಡೆ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಿಬ್ಬಂದಿಗೆ ಸಮರ್ಪಕವಾದ ಸಂಬಳವನ್ನೂ ನೀಡಿಲ್ಲ. 10 ಕೆ.ಜಿ ಅಕ್ಕಿ ಗ್ಯಾರಂಟಿಯನ್ನು ಈಡೇರಿಸಲಾಗಿಲ್ಲ. ಕೇಂದ್ರದ ಐದು ಕೆ.ಜಿ ಅಕ್ಕಿಯೇ ಜನರ ಸಹಾಯಕ್ಕೆ ಬಂದಿದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿಯರ ಹುಡುಕಾಟ ಪೂರ್ಣಗೊಂಡಿಲ್ಲ’ ಎಂದು ಬೊಮ್ಮಾಯಿ ಟೀಕಿಸಿದರು.
‘ಈ ಮಧ್ಯೆ ಗ್ಯಾರಂಟಿಗಾಗಿ ಎಸ್‌ಸಿ ಎಸ್‌ಟಿ ಅಭಿವೃದ್ಧಿಗಾಗಿ ಮೀಸಲಾದ ₹11,000 ಕೋಟಿ ಬಳಕೆ ಮಾಡಿಕೊಂಡು ಎಸ್‌ಸಿ–ಎಸ್‌ಟಿಯವರಿಗೆ ಸರ್ಕಾರ ಮೋಸ ಮಾಡಿದೆ’ ಎಂದು ಹೇಳಿದ್ದಾರೆ
‘ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರು ಮತ್ತು ಸಾರ್ವಜನಿಕರ ಹಿತ ಕಾಯಲು ವಿಫಲವಾಗಿದೆ. ನಮ್ಮ ಅಣೆಕಟ್ಟೆಗಳ ಕೀಲಿಕೈಯನ್ನು ತಮಿಳುನಾಡಿಗೆ ಒಪ್ಪಿಸಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಪೈಪೋಟಿಗೆ ಇಳಿದಿದ್ದಾರೆ. ಇದರಿಂದ ಆಡಳಿತದ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಿದೆ. ಕಾನೂನು ಸುವ್ಯವಸ್ಥೆಯೂ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ–ಸುಲಿಗೆ ಸಾಮಾನ್ಯವಾಗಿದೆ’ ಎಂದು ಹರಿಹಾಯ್ದಿದ್ದಾರೆ.
‘ಜನಸಾಮಾನ್ಯರು, ಮಾಧ್ಯಮದವರು, ಸಂಘ–ಸಂಸ್ಥೆಗಳು ದುರಾಡಳಿತದ ವಿರುದ್ಧ ಧ್ವನಿ ಎತ್ತುವುದನ್ನು ಪೊಲೀಸ್ ಇಲಾಖೆ ಮೂಲಕ ಹತ್ತಿಕ್ಕುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮತ್ತು ಸರ್ವಾಧಿಕಾರಿ ಆಡಳಿತ ಎಂಬುದು ನೂರು ದಿನಗಳಲ್ಲಿ ಗೊತ್ತಾಗಿದೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.