ಬೆಂಗಳೂರು: ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು, ಶಿಫಾರಸುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವುದು ಸಿದ್ದರಾಮಯ್ಯನವರು ನಾಡಿನ ಜನರ ಹಾದಿ ತಪ್ಪಿಸುವ ತಂತ್ರ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಅವರು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಜಾತಿ ಗಣತಿ ಬಗ್ಗೆ ಭಾನುವಾರ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.
ಸಿದ್ದರಾಮಯ್ಯನವರೇ ನೀವು ಹಾದಿ ತಪ್ಪಿಸುವುದರಲ್ಲಿ ಎಕ್ಸ್‌ಪರ್ಟ್! ಇಡೀ ಕರ್ನಾಟಕವನ್ನು ನಾಲ್ಕು ದಶಕಗಳಿಂದ ಹಾದಿ ತಪ್ಪಿಸುತ್ತಲೇ ಬಂದಿದ್ದೀರಿ. ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಎಂ.ಕೃಷ್ಣರಂಥ ಘಟಾನುಘಟಿಗಳ ಪಥವನ್ನೇ ಬದಲಿಸಿದ ನಿಮಗೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಬೇಕಿದೆ. ಮುಡಾ ವಿಚಾರದಲ್ಲಿ ಸಂಕಷ್ಟ ಎದುರಾಗುತ್ತಿದ್ದಂತೆ ನೀವು ಜಾತಿ ಗಣತಿ ವಿಚಾರವನ್ನು ಮುಂದಿಟ್ಟುಕೊಂಡು ಹಿಂದುಳಿದ ಹಾಗೂ ಶೋಷಿತ ವರ್ಗದ ದಿಕ್ಕು ತಪ್ಪಿಸಲು ಹೊರಟಿದ್ದೀರಿ ಎಂದು ಹೇಳಿದ್ದಾರೆ.
ಎಷ್ಟು ದಿನ ಈ ನಾಟಕ ಸ್ವಾಮಿ? ಅಧಿಕಾರಕ್ಕೆ ಬಂದಾಗಿನಿಂದ ಜಾತಿ ಗಣತಿ ಅನುಷ್ಠಾನ ಮಾಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದೀರೇ, ವಿನಾ ಆ ದಿಶೆಯಲ್ಲಿ ಒಂದೇ ಒಂದು ಹೆಜ್ಜೆ ಮುಂದಿಟ್ಟಿಲ್ಲ. ಹಲವು ಕಾರಣದಿಂದ ಜಾರಿಯಾಗಿಲ್ಲ ಎಂದು ಮಗುಮ್ಮಾಗಿ ಹೇಳಿದರೆ ಸಾಕೆ? ಆ ಕಾರಣವನ್ನು ಬಹಿರಂಗಪಡಿಸಿ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಭಯವೇ? ಅಥವಾ ವರದಿಯಲ್ಲಿ ಲೋಪಗಳಿವೆಯೇ ? ಯಾವುದನ್ನೂ ಸ್ಪಷ್ಟಪಡಿಸದೇ ಜಾರಿ ಜಪ ಎಷ್ಟು ವರ್ಷ ಮುಂದುವರಿಸುತ್ತೀರಿ ? ಸಂಕಟ ಬಂದಾಗಲೆಲ್ಲ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಜಾರಿ, ಅಹಿಂದ ವರ್ಗಕ್ಕೆ ಅನ್ಯಾಯ ಎಂದು ಭಾಷಣ ಬಿಗಿದು ಬಚಾವ್ ಆಗುವುದು ನಿಮಗೆ ಚಾಳಿಯಾಗಿ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಭಾಷೆಯಲ್ಲಿ ಹೇಳಬೇಕೆಂದರೆ ಸಿದ್ದರಾಮಯ್ಯ ಅವರ ನಡೆ ವೃತ್ತಿಪರ ಅಪರಾಧಿ ಎಸಗುವ ಗಮನ ಸೆಳೆಯುವ ತಂತ್ರ ಎನ್ನದೇ ವಿಧಿ ಇಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.