ADVERTISEMENT

CM ಕುರ್ಚಿ ಬಯಸುತ್ತಿರುವವರಿಗೆ ಸಿದ್ದರಾಮಯ್ಯ ಪೆಡಂಭೂತ: ಸಚಿವ ಎಚ್.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 13:12 IST
Last Updated 30 ಸೆಪ್ಟೆಂಬರ್ 2024, 13:12 IST
ಎಚ್.ಸಿ. ಮಹದೇವಪ್ಪ
ಎಚ್.ಸಿ. ಮಹದೇವಪ್ಪ   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ; ಅವರ ಕುರ್ಚಿಯಿಂದ ಹೋದರೆ ಸಾಕು ಆಸೆಗಣ್ಣಿನಿಂದ ಬಯಸುತ್ತಿರುವವರಿಗೆ ಪೆಡಂಭೂತವಾಗಿ ಕಾಡುತ್ತಿದ್ದಾರೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಯಾವುದೇ ಗೊಂದಲ ಇಲ್ಲ’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಸಾಗುತ್ತಿದೆ? ತಪ್ಪೇ ಮಾಡಿಲ್ಲದಿದ್ದರೂ ಹೀಗೆ ಮಾಡುತ್ತಿದ್ದಾರಲ್ಲ ಎಂಬ ನೋವು ಸಿದ್ದರಾಮಯ್ಯ ಅವರಿಗಿದೆ. ಪ್ರಜಾಪ್ರಭುತ್ವದ ಭವಿಷ್ಯವನ್ನು ನೆನೆದು‌ ವಿಷಾದಕ್ಕೆ ಒಳಗಾಗಿದ್ದಾರೆ’ ಎಂದರು.

ADVERTISEMENT

‘ಎಲ್ಲ ಪರಿಸ್ಥಿತಿಯಲ್ಲೂ ವ್ಯಕ್ತಿಗಿಂತ ಪಕ್ಷ ಹಾಗೂ ಪಕ್ಷಕ್ಕಿಂತ ದೇಶ ಮುಖ್ಯ. ಇದರಲ್ಲಿ ಯಾವುದೇ ಅನುಮಾನವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಶಾಶ್ವತವಾಗಿರುತ್ತದೆ’ ಎಂದು ಹೇಳಿದರು.

‘ನಮ್ಮ ಸರ್ಕಾರವನ್ನು ಕೆಡವಲು ವ್ಯವಸ್ಥಿತ ಹುನ್ನಾರವನ್ನು ಬಿಜೆಪಿ-ಜೆಡಿಎಸ್‌ ನಾಯಕರು ಮಾಡುತ್ತಿದ್ದಾರೆ. ರಾಜ್ಯಪಾಲರು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಚುನಾಯಿತ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಬೇಗ ಓಡಿ ಹೋಗಿ ಆ ಕುರ್ಚಿಯಲ್ಲಿ ಕೂರುವ ಆಸೆಯನ್ನು ಕೆಲವರು ಇಟ್ಟುಕೊಂಡಿದ್ದಾರೆ. ಆದರೆ, ಅದು ಆಗುವುದಿಲ್ಲ’ ಎಂದರು.

‘ದೇಶದಲ್ಲಿ ಪ್ರಮುಖವಾದ 250ಕ್ಕೂ ಹೆಚ್ಚು ರಾಜಕಾರಣಿಗಳ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಹಾಗೆಂದು ರಾಜೀನಾಮೆ ಕೊಡುವಂತೆ ಇತರ ಎಲ್ಲರನ್ನೂ ಬಿಟ್ಟು ಸಿದ್ದರಾಮಯ್ಯ ಅವರನ್ನು ಮಾತ್ರ ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಎಫ್‌ಐಆರ್ ಆದಾಕ್ಷಣ ಅಥವಾ ಜೈಲಿಗೆ ಹೋದಾಕ್ಷಣ ರಾಜೀನಾಮೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಕೂಡ ಹೇಳಿಲ್ಲ’ ಎಂದು ಹೇಳಿದರು.

‘ನೈತಿಕತೆ ಇಟ್ಟುಕೊಂಡಿರುವವರು ರಾಜಕೀಯದಲ್ಲಿ ಇರುವುದೇ ಇಲ್ಲ. ನನ್ನನ್ನೂ ಸೇರಿದಂತೆ ಅಂಥವರು ಯಾರಿದ್ದಾರೆ?’ ಎಂದು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.