ADVERTISEMENT

ಶಿವಮೊಗ್ಗ ಕೋಮು ಗಲಭೆಗೆ ಸಿದ್ದರಾಮಯ್ಯ, ಪರಮೇಶ್ವರ ಕುಮ್ಮಕ್ಕು: ಶೋಭಾ ಕರಂದ್ಲಾಜೆ

ಚಾಮರಾಜನಗರದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 7:21 IST
Last Updated 3 ಅಕ್ಟೋಬರ್ 2023, 7:21 IST
ಸಿದ್ದರಾಮಯ್ಯ ಮತ್ತು ಶೋಭಾ ಕರಂದ್ಲಾಜೆ
ಸಿದ್ದರಾಮಯ್ಯ ಮತ್ತು ಶೋಭಾ ಕರಂದ್ಲಾಜೆ    

ಚಾಮರಾಜನಗರ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ.ಪರಮೇಶ್ವರ ಅವರು ಕುಮ್ಮಕ್ಕು ನೀಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಆರೋಪಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ರಾಜ್ಯದಲ್ಲಿ ಈದ್ ಮಿಲಾದ್ ಆಚರಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಆಯುಧ ಹಿಡಿದು ಸಾಗಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಗಲಭೆಯ ಬಗ್ಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಎಲ್ಲ ದಾಖಲೆಗಳಿದ್ದರೂ ಪೊಲೀಸರು ಏನು ಮಾಡುತ್ತಿದ್ದಾರೆ? ರಾಜ್ಯ ಸರ್ಕಾರ ಅವರ ಕೈಕಟ್ಟಿಹಾಕಿದೆ’ ಎಂದು ದೂರಿದರು.

ಓಲೈಕೆ ರಾಜಕಾರಣ: ‘ರಾಜ್ಯ ಸರ್ಕಾರ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಒಂದು ಸಮುದಾಯವನ್ನು ಓಲೈಕೆ ಮಾಡಲು ಸರ್ಕಾರ ಇದೆಲ್ಲವನ್ನೂ ಮಾಡುತ್ತಿದೆ. ಮುಸ್ಲಿಮರ ಮತಗಳಿಂದ ಕಾಂಗ್ರೆಸ್ ಗೆ 135 ಸ್ಥಾನಗಳು ಬಂದಿವೆಯೇ’ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್ ಈ ಹಿಂದೆ 60 ವರ್ಷಗಳ ಕಾಲ ಸರ್ಕಾರ ನಡೆಸಿದೆ. ಆದರೆ ಈ ರೀತಿ ಆಗಿರಲಿಲ್ಲ. ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆ, ಕುಟ್ಟಪ್ಪ ಅವರ ಸಾವಿನೊಂದಿಗೆ ಆರಂಭವಾದ ದುರ್ದೆಸೆ ಈಗಲೂ ಮುಂದುವರಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದೊಂದು ಸಾಮಾನ್ಯ ಘಟನೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ. ನಿಮ್ಮ ಮನೆ ಮುಂದೆ ಬಂದು ಯಾರಾದರೂ ಈ ರೀತಿ ಮಾಡಿದ್ದರೆ ಸುಮ್ಮನೆ ಇರುತ್ತಿದ್ದಿರಾ ಪರಮೇಶ್ವರ್ ಅವರೇ’ ಎಂದು ಸಚಿವೆ ಪ್ರಶ್ನಿಸಿದರು.

‘ಇದು ಪೂರ್ನನಿಯೋಜಿತ ಕೃತ್ಯ. ಈದ್ ಮಿಲಾದ್ ಮೆರವಣಿಗೆ, ಆಚರಣೆ ಒಂದು ದಿನದಲ್ಲಿ ನಡೆಯಬೇಕು. ಆದರೆ, ರಾಜ್ಯದಲ್ಲಿ ದಿನ ಬಿಟ್ಟು ದಿನ ಒಂದೊಂದು ಕಡೆ ನಡೆಯುತ್ತಿದೆ. ಕುಟ್ಪಪ್ಪ ಅವರ ಹತ್ಯೆ ಸಂದರ್ಭದಲ್ಲಿ ಕೇರಳ, ಭಟ್ಕಳ ಸೇರಿದಂತೆ ವಿವಿಧ ಊರುಗಳಿಂದ ಜನರು ಬಂದಿದ್ದರು. ಶಿವಮೊಗ್ಗದಲ್ಲೂ ಇದೇ ರೀತಿ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯದಲ್ಲಿ ಔರಂಗಜೇಬನ ತುಘಲಕ್ ಸರ್ಕಾರ ಇದೆಯೇ? ಹಿಂದೂಗಳನ್ನು ಅವಮಾನ ಮಾಡಿದರೆ ಸುಮ್ಮನೆ ಇರುವುದಿಲ್ಲ. ಸರ್ಕಾರಕ್ಕೆ ಎಚ್ಚರಿಕೆ ಇರಲಿ’ ಎಂದರು.

ಆದರ್ಶ ಯಾರು?: ‘ಶಿವಮೊಗ್ಗವನ್ನು ಹಸಿರೀಕರಣ ಮಾಡಲಾಗಿದೆ. ಅಖಂಡ ಭಾರತ ನಕ್ಷೆಯಲ್ಲಿ ಔರಂಗಜೇಬನ ಫೋಟೊ ಹಾಕಲಾಗಿದೆ. ಔರಂಗಜೇಬ್, ಆತನ ಖಡ್ಗ, ಟಿಪ್ಪು ಸುಲ್ತಾನನ ದೊಡ್ಡ ಕಟ್ ಔಟ್ ಗಳನ್ನು ಹಾಕಲಾಗಿದೆ. ಮುಸ್ಲಿಮರಿಗೆ ಆದರ್ಶ ಯಾರು? ಹಿಂದೂಗಳನ್ನು ಮಾರಣಹೋಮ ಮಾಡಿದ ಔರಂಗಜೇಬ, ಟಿಪ್ಪು ಸುಲ್ತಾನ್ ನಂತಹವರೇ? ಅವರ ಆದರ್ಶ ಮಹಮ್ಮದ್ ಪೈಗಂಬರ್, ಅಬ್ದುಲ್ ಕಲಾಂ ಆಗಬೇಕಿತ್ತು.

ಭಾರತದಲ್ಲಿ ಯಾವ ರೀತಿಯ ಸಂಸ್ಕೃತಿಯನ್ನು ಪ್ರದರ್ಶಿಸಲು ಇವರು ಹೊರಟಿದ್ದಾರೆ? ಸರ್ಕಾರ ಹಾಗೂ ಹಿಂದೂಗಳನ್ನು ಹೆದರಿಸಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.