ಬೆಂಗಳೂರು: ‘ಟಿಪ್ಪು ಪ್ರತಿಮೆ ನಿರ್ಮಿಸಲಿ ಬಿಡಿ. ಅದರಲ್ಲಿ ತಪ್ಪೇನಿದೆ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಮೈಸೂರಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುವುದಾಗಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಇತಿಹಾಸ ತಿರುಚುವವರು’ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ‘ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಾಡಿ ಮಲ್ಲಮ್ಮ ಅವರೆಲ್ಲರೂ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಅವರ ಪ್ರತಿಮೆಗಳ ನಿರ್ಮಿಸುವ ಅಪೇಕ್ಷೆ ಹೊಂದಿದ್ದರೆ ಯಾರೂ ವಿರೋಧಿಸಬಾರದು’ ಎಂದರು.
ಶಾಸಕ ಜಿ. ಪರಮೇಶ್ವರ ಮಾತನಾಡಿ, ‘ಟಿಪ್ಪು ಪ್ರತಿಮೆ ವಿಚಾರವಾಗಿ ಬಿಜೆಪಿಯವರು ಮುಗಿಬಿದ್ದಿದ್ದಾರೆ. ಮೊದಲಿನಿಂದಲೂ ಅದನ್ನು ಅವರು ವಿರೋಧಿಸುತ್ತಲೇ ಬಂದಿದ್ದಾರೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಪ್ರತಿಮೆ ನಿರ್ಮಿಸುವ ವಿಚಾರದಲ್ಲಿ ತನ್ವೀರ್ ಸೇಠ್ ಅವರ ಅಭಿಪ್ರಾಯದ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
‘ರಾಜ್ಯದಲ್ಲಿ ಎಲ್ಲೇ ಟಿಪ್ಪು ಪ್ರತಿಮೆ ಸ್ಥಾಪಿಸಿದರೂ ಅದನ್ನು ಧ್ವಂಸ ಮಾಡುತ್ತೇವೆ’ ಎಂಬ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಈ ವಿಷಯದಲ್ಲಿ ಮುಖ್ಯಮಂತ್ರಿ ಉತ್ತರಿಸಬೇಕು. ಬೊಮ್ಮಾಯಿ ಅವರು ನಾವು ಎಲ್ಲ ವರ್ಗದವರ ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದು ಅವರ ಕರ್ತವ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.