ADVERTISEMENT

ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 21:25 IST
Last Updated 18 ಜುಲೈ 2024, 21:25 IST
   

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ನಮ್ಮ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಉತ್ತರ ನೀಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುರಿತ ಕಾಳಜಿ ನಾನು ಬದುಕಿರುವವರೆಗೂ ಇರುತ್ತದೆ. ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಯವರಿಂದ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ. ಅದರ ಅಗತ್ಯವೂ ಇಲ್ಲ’ ಎಂದು ಬಿಜೆಪಿ ಸದಸ್ಯರನ್ನು ತಿವಿದರು.

ADVERTISEMENT

‘ಎಸ್‌ಸಿಎಸ್‌ಪಿ ಟಿಎಸ್‌ಪಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಆದಕ್ಕಾಗಿ ಕಾನೂನು ಮಾಡಿದೆವು. ನೀವು ಬಿಜೆಪಿಯವರು ಮಾಡಲಿಲ್ಲ. ಗುತ್ತಿಗೆಯಲ್ಲಿ ಮೀಸಲಾತಿ ಜಾರಿ ಮಾಡಿದ್ದು ಮೊದಲ ರಾಜ್ಯ ನಮ್ಮದು. ಅದನ್ನು ಮಾಡಿದವರೂ ನಾವು. ಆದ್ದರಿಂದ ನಾವು ಪರಿಶಿಷ್ಟರ ವಿರೋಧಿ ಆಗಲು ಸಾಧ್ಯವೇ? ಈ ವರ್ಗಕ್ಕೆ ಏನೂ ಮಾಡದ ನೀವು ಅನ್ಯಾಯ ಆಗಿದೆ, ಅನ್ಯಾಯ ಆಗಿದೆ... ಎಂದು ಬೊಬ್ಬೆ ಹೊಡೆಯುತ್ತಿದ್ದೀರಿ’ ಎಂದು ಕಿಡಿಕಾರಿದರು.

‘ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್ ತಮಿಳುನಾಡಿನ ಭೋವಿ ಸಮಾಜಕ್ಕೆ ಸೇರಿದವರು’ ಎಂದು ಸಿದ್ದರಾಮಯ್ಯ ಹೇಳಿದಾಗ, ಕೆಲವು ಕಾಂಗ್ರೆಸ್‌ ಸದಸ್ಯರು, ‘ತಮಿಳುನಾಡಿನಲ್ಲಿ ಭೋವಿ ಸಮಾಜ ಹಿಂದುಳಿದ ವರ್ಗವೇ ಹೊರತು ಪರಿಶಿಷ್ಟ ಜಾತಿ ಅಲ್ಲ’ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ಎನ್ನುವ ಉಲ್ಲೇಖ ಇದೆ. ಇಬ್ಬರೂ ಸೇರಿ ಶೇ 24.1 ಜನಸಂಖ್ಯೆ ಇದ್ದಾರೆ. ಇವರ ಅಭಿವೃದ್ಧಿ ಆದರೆ ಮಾತ್ರ ಸಮ ಸಮಾಜದ ಆಶಯ ಈಡೇರುತ್ತದೆ. ಈ ಸಮುದಾಯಗಳಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಬರುತ್ತದೆ. ಅಸಮಾನತೆ ಇರುವವರೆಗೂ ಸಮಾನತೆ ಸಾಧ್ಯವಿಲ್ಲ. ಸಂವಿಧಾನ ಬಂದು 70 ವರ್ಷ ಆದರೂ ಸಮಾನತೆ ಸಿಕ್ಕಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ವಾಲ್ಮೀಕಿ, ಭೋವಿ, ಆದಿಜಾಂಬವ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸೇರಿ ಹಲವು ಅಭಿವೃದ್ಧಿ ನಿಗಮಗಳು ಆರಂಭಿಸಲಾಗಿದೆ’ ಎಂದರು.

‘ಈ ಎಲ್ಲ ನಿಗಮಗಳ ಉದ್ದೇಶ ಆಯಾ ಸಮುದಾಯಗಳನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದೇ ಆಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ– ಆರಗ ಜ್ಞಾನೇಂದ್ರ ಮಾತಿನ ಜಟಾಪಟಿ

ಸದನದಲ್ಲಿ ಉತ್ತರ ನೀಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಆರಗ ಜ್ಞಾನೇಂದ್ರ ಮಧ್ಯೆ ಮಾತಿನ ಜಟಾಪಟಿ ನಡೆಯಿತು.

* ಸಿದ್ದರಾಮಯ್ಯ– ನಾನು ಡೆತ್‌ ನೋಟ್‌ ಓದುತ್ತಿಲ್ಲ. ಅಶೋಕ ಅವರೇ ಓದಿದ್ದಾರಲ್ಲ

* ಆರಗ– ನೀವೂ ಡೆತ್‌ ನೋಟ್‌ ಕೂಡ ಓದಬೇಕು. ಅದರಲ್ಲಿ ಸಚಿವರ ಮೌಖಿಕ ಸೂಚನೆ ನೀಡಿರುವ ವಿಚಾರ ಇದೆ. ಅದನ್ನು ಬಿಟ್ಟು ಅನಗತ್ಯ ಮಾಹಿತಿ ಓದುವುದು ಸರಿಯಲ್ಲ...

* ಆರಗ– ಮುಖ್ಯಮಂತ್ರಿಯವರು ಡೆತ್‌ನೋಟ್ ಸರಿಯಾಗಿ ಓದಬೇಕು. ಆರೋಪಿಗಳನ್ನು ರಕ್ಷಣೆ ಮಾಡಲು ಮುಂದಾಗಬೇಡಿ. ಆತ್ಮವಂಚನೆ ಮಾಡಿಕೊಳ್ಳಬೇಡಿ. ನಿಮಗೆ ಶೋಭೆ ತರುವುದಿಲ್ಲ. ಎಫ್‌ಐಆರ್‌ನಿಂದ ಉದ್ದೇಶಪೂರ್ವಕವಾಗಿ ಮಂತ್ರಿ ಹೆಸರು ತೆಗೆಸಿದ್ದೀರಿ?

* ಸಿದ್ದರಾಮಯ್ಯ– ನಮ್ಮ ಸರ್ಕಾರ ಯಾರನ್ನೂ ರಕ್ಷಿಸಲ್ಲ

*  ಆರಗ– ಪೊಲೀಸರು ಮೃತರ ಪತ್ನಿಯನ್ನು ಮಧ್ಯರಾತ್ರಿ 2 ಗಂಟೆಗೆ ಪೊಲೀಸ್ ಠಾಣೆಗೆ ಕರೆಸಿ ಹೇಳಿಕೆ ಪಡೆದಿದ್ದಾರೆ. ಮಧ್ಯರಾತ್ರ ಕರೆಸಿ ಹೇಳಿಕೆ ಪಡೆಯುವ ಜರೂರು ಏನಿತ್ತು. ಅಧಿಕಾರಿಯ ಡೆತ್‌ ನೋಟ್‌ಗೆ ಬೆಲೆ ಇಲ್ಲವೇ? ಇದ್ದರೆ ಅದರ ಆಧಾರದಲ್ಲಿ ಎಫ್‌ಐಆರ್ ಏಕೆ ದಾಖಲಿಸಲಿಲ್ಲ 

* ಸಿದ್ದರಾಮಯ್ಯ– ಐ ಯಾಮ್‌ ನಾಟ್‌ ಈಲ್ಡಿಂಗ್‌

* ಸುನಿಲ್‌ ಕುಮಾರ್‌– ಎಫ್‌ಐಆರ್‌ನಲ್ಲಿ ಸಚಿವರ ಹೆಸರು ಸೇರಿಸಿಲ್ಲ

* ಸಿದ್ದರಾಮಯ್ಯ– ನಿಮಗೆ ಹೆದರಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.