ಬೆಂಗಳೂರು: ಚಾಮರಾಜಪೇಟೆಯ ಪಕ್ಷದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಮನೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿದರು.
ಆಗಸ್ಟ್ 5ರಂದು ಜಮೀರ್ ಮನೆ, ಕಚೇರಿ ಮತ್ತು ಸಹೋದರರು, ಸಂಬಂಧಿಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ, ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಜಮೀರ್ ಶನಿವಾರ ಭೇಟಿ ಮಾಡಿದ್ದರು.
‘ಐಎಂಎ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ನಾನು ಮನೆ ಕಟ್ಟಿರುವುದು ಐಎಂಎ ಹಣದಿಂದ ಎಂದು ಅಪಪ್ರಚಾರ ಮಾಡಲಾಗಿದೆ. ಇದೆಲ್ಲ ಸುಳ್ಳು’ ಎಂದು ಸಿದ್ದರಾಮಯ್ಯ ಬಳಿ ಜಮೀರ್ ಹೇಳಿಕೊಂಡಿದ್ದಾರೆ. ಅದಕ್ಕೆ ಸಿದ್ದರಾಮಯ್ಯ, ಹಿರಿಯ ವಕೀಲರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ಜಮೀರ್ ಅವರ ಗೃಹಪ್ರವೇಶಕ್ಕೆ ಬರಲು ಆಗಿರಲಿಲ್ಲ. ಹೀಗಾಗಿ, ಜಮೀರ್ ಮನೆಗೆ ಇಂದು ಬಂದಿದ್ದೇನೆ. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಅವರ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ’ ಎಂದು ಆರೋಪಿಸಿದರು.
‘ಇಡಿ ದಾಳಿ ಬಗ್ಗೆ ಜಮೀರ್‌ಗೆ ನಾನು ಸಲಹೆ ನೀಡಿಲ್ಲ. ಸಲಹೆ ನೀಡಲು ಅವರ ವಕೀಲರಿದ್ದಾರೆ. ನಮ್ಮ ಪಕ್ಷದ ಕುರಿತು ಮಾತ್ರ ಮಾತನಾಡಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.