ADVERTISEMENT

ಮೋದಿ ವೈಫಲ್ಯದಿಂದ ಮುಗ್ಧ ನವೀನ್‌ ಸಾವು: ಸಿದ್ದರಾಮಯ್ಯ

ಟ್ವಿಟರ್‌ನಲ್ಲಿ ಸಿದ್ದರಾಮಯ್ಯ ಮತ್ತು ಸಿ.ಟಿ. ರವಿ ನಡುವೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 7:06 IST
Last Updated 2 ಮಾರ್ಚ್ 2022, 7:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 'ಪ್ರಧಾನಿ ನರೇಂದ್ರ ಮೋದಿ ಅವರ ವೈಫಲ್ಯದಿಂದ ಮುಗ್ಧ ನವೀನ್‌ ತನ್ನ ಪ್ರಾಣವನ್ನು ಕಳೆದುಕೊಂಡಿರುವುದಕ್ಕೆ ನಾನು ಸ್ಥಿಮಿತವನ್ನು ಕಳೆದುಕೊಂಡಿದ್ದೇನೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ರಷ್ಯಾ-ಉಕ್ರೇನ್‌ ಸಂಘರ್ಷದಿಂದ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ, ಹಾವೇರಿ ಜಿಲ್ಲೆಯ ಚಳಗೇರಿಯ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಮೃತ ಪಟ್ಟಿದ್ದಕ್ಕೆ ಕೇಂದ್ರ ಸರ್ಕಾರವೂ ಹೊಣೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಬಿಜೆಪಿರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪ್ರತಿಕ್ರಿಯಿಸಿ, 'ಸ್ಥಿಮಿತವನ್ನು ಕಳೆದುಕೊಂಡಿದ್ದೀರಾ? ಕಳೆದ ಕೆಲವು ವಾರಗಳಿಂದ ನಿಮ್ಮ ಜಿಹಾದಿ ಜಗತ್ತಿನಲ್ಲಿ ನಿದ್ರಿಸುತ್ತಿದ್ದೀರಾ?' ಎಂದು ಪ್ರಶ್ನಿಸಿದ್ದರು.

'ವಿದ್ಯಾರ್ಥಿಗಳು ಯುದ್ಧದ ಬಗ್ಗೆ ಭೀತಿಗೊಂಡಿದ್ದಾಗ, ಎಚ್ಚರಿಕೆಗಳನ್ನು ಕಡೆಗಣಿಸಿ ನಿಮ್ಮ ಸರ್ಕಾರ ನಿದ್ರಿಸುತ್ತಿತ್ತು. ನಿಮ್ಮ ಸರ್ಕಾರ ಎಚ್ಚೆತ್ತಿರುತ್ತಿದ್ದರೆ ನವೀನ್‌ ಈಗಲೂ ಬದುಕಿರುತ್ತಿದ್ದ. ಆತನ ರಕ್ತ ನಿಮ್ಮ ಕೈಗಳ ಮೇಲಿದೆ. ಅದೇ ದುಃಖಕರ ಸಂಗತಿ' ಎಂದು ಸಿದ್ದರಾಮಯ್ಯ ಮರು ಉತ್ತರ ನೀಡಿದ್ದಾರೆ.

ADVERTISEMENT

'ಸಿದ್ದರಾಮಯ್ಯ ಅವರೇ, ನಿಮ್ಮ ಪಕ್ಷದ ಮಾಲೀಕರನ್ನು ಪೂಜಿಸುತ್ತ ಸ್ಥಿಮಿತವನ್ನು ಕಳೆದುಕೊಂಡಿದ್ದೀರಾ? ಅಥವಾ ಕಳೆದ ಕೆಲವು ವಾರಗಳಿಂದ ನಿಮ್ಮ ಜಿಹಾದಿ ಜಗತ್ತಿನಲ್ಲಿ ನಿದ್ರಿಸುತ್ತಿದ್ದೀರಾ? ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್‌ ಕರೆತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಎಷ್ಟು ಪರಿಶ್ರಮ ಪಡುತ್ತಿದೆ ಎಂಬುದು ನೀವು ಎಚ್ಚರದಲ್ಲಿ ಇದ್ದಿದ್ದರೆ ಗೊತ್ತಾಗುತ್ತಿತ್ತು' ಎಂದು ಸಿ.ಟಿ. ರವಿ ಅವರು ಟ್ವೀಟ್‌ ಮೂಲಕ ಪ್ರಶ್ನಿಸಿದ್ದರು.

'ನವೀನ್ ಸಾವಿಗೆ ಯುದ್ಧದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರವೂ ಅಷ್ಟೇ ಹೊಣೆ. ಪ್ರಧಾನಿ ಮತ್ತು ಕೇಂದ್ರ ವಿದೇಶಾಂಗ ಸಚಿವಾಲಯ ಅಂತರರಾಷ್ಟ್ರೀಯ ಸಂಬಂಧಗಳನ್ನು‌ ಬಳಸಿಕೊಂಡು ಯುದ್ದದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಪ್ರಯತ್ನಿಸಬೇಕು' ಎಂದು ಸಿದ್ದರಾಮಯ್ಯ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.